

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 'ಗೋಟ್ ಇಂಡಿಯಾ ಟೂರ್-2025' ಕಾರ್ಯಕ್ರಮ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕ್ರೀಡಾಂಗಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಹತ್ತಿರದಿಂದ ಲಿಯೋನಲ್ ಮೆಸ್ಸಿ ಅವರನ್ನು ನೋಡಿ ಸಂಭ್ರಮಿಸಿದರು.
ಸಂಜೆ ಮೆಸ್ಸಿ ಅವರ ಉಪಸ್ಥಿತಿ ಹಾಗೂ ಅವರು ಭಾರತೀಯ ಕ್ರೀಡಾ ಸಂಸ್ಕೃತಿಯೊಂದಿಗೆ ಹೊಂದಿರುವ ಸಂಪರ್ಕದ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಬಾಲಿವುಡ್ ನಟರಾದ ಟೈಗರ್ ಶ್ರಾಫ್ ಮತ್ತು ಅಜಯ್ ದೇವಗನ್ ಅವರಿಗೆ ಸನ್ಮಾನಿಸಿದದ್ದು ಅನಿರೀಕ್ಷಿತ ಘಟನೆಗೆ ಸಾಕ್ಷಿಯಾಯಿತು.
ಅವರಿಬ್ಬರನ್ನೂ ಪ್ರೇಕ್ಷಕರು ಬೂಯಿಂಗ್ ಮಾಡಲು ಶುರು ಮಾಡುತ್ತಿದ್ದಂತೆಯೇ ಕ್ರೀಡಾಂಗಣದ ತುಂಬೆಲ್ಲಾ ಘೋಷಣೆ, ಕಿರುಚಾಟ ಕಂಡುಬಂದಿತು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬಾಲಿವುಡ್ ನಟರನ್ನು ಸನ್ಮಾನಿಸುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಜೋರು ಧ್ವನಿಯಲ್ಲಿ ಕೆಟ್ಟದಾಗಿ ಘೋಷಣೆ ಕೂಗುವ ಮೂಲಕ ಗದ್ದಲವನ್ನುಂಟು ಮಾಡಿದರು.
ಟೈಗರ್ ಶ್ರಾಫ್ ಅವರನ್ನು ವೇದಿಕೆಗೆ ಕರೆದು 'ಯೂತ್ ಐಕಾನ್' ಮತ್ತು ಭಾರತದ ಯುವ ಆ್ಯಕ್ಷನ್ ಸ್ಟಾರ್ ಎಂದು ಪರಿಚಯಿಸಲಾಯಿತು. ಮಹಾರಾಷ್ಟ್ರದಾದ್ಯಂತ ಯುವ ಫುಟ್ಬಾಲ್ ಪ್ರತಿಭೆಗಳನ್ನು ಸ್ಕೌಟಿಂಗ್, ತರಬೇತಿ ಮತ್ತು ಪೋಷಣೆಯ ಮೇಲೆ ಕೇಂದ್ರೀಕರಿಸಿದ 'ಮಹಾದೇವ' ಪ್ರಾಜೆಕ್ಟ್ ಭಾಗವಾಗಿ ನಟರು ವೇದಿಕೆಯಲ್ಲಿ ಹಾಜರಿದ್ದರು. ಅಜಯ್ ದೇವಗನ್ ಅವರನ್ನು ಶಿಸ್ತುಬದ್ಧ ನಟ ಎಂದು ಬಣ್ಣಿಸಲಾಯಿತು.
ಪ್ರಸಿದ್ಧ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನಾಧಾರಿತ ಮೈದಾನ ಚಿತ್ರದಲ್ಲಿನ ನಟನೆಗಾಗಿ ಅಜಯ್ ದೇವಗನ್ ಅವರನ್ನು ಹೈಲೆಟ್ ಮಾಡಲಾಯಿತಾದರೂ ಪ್ರೇಕ್ಷಕರು ಬೂಯಿಂಗ್ ಮಾಡುವುದನ್ನು ಮುಂದುವರೆಸಿದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಮೆಸ್ಸಿ ಕಾರ್ಯಕ್ರಮದಲ್ಲಿ ಬಾಲವುಡ್ ನಟರಿಗೆ ಸನ್ಮಾನ ಬೇಕಿತ್ತೆ ಎಂದು ಪ್ರಶ್ನಿಸುತ್ತಿದ್ದಾರೆ.
Advertisement