

ಕೋಲ್ಕತಾ: ಅಕ್ರಮ ಮತದಾರರ ಗುರುತಿಸುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ತೀವ್ರ ಪರಿಷ್ಕರಣೆ (SIR) ಟಿಎಂಸಿ ನಾಯಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
SIR ಕರಡು ಪಟ್ಟಿಯಲ್ಲಿ ಟಿಎಂಸಿ ಕೌನ್ಸಿಲರ್ ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದು, ಇದೇ ಕಾರಣಕ್ಕೆ ಆಯೋಗದ ವಿರುದ್ಧ ಕೆಂಡಕಾರಿರುವ ಅವರು 'ದಾಖಲೆಗಳಲ್ಲೇಕೆ.. ನಿಜವಾಗಿಯೂ ಕೊಂದು ಬಿಡಿ.. ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಿ' ಎಂದು ಕಿಡಿಕಾರಿದ್ದಾರೆ.
ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ, ಡಂಕುನಿ ಪುರಸಭೆಯ ವಾರ್ಡ್ ಸಂಖ್ಯೆ 18 ರ ಟಿಎಂಸಿ ಕೌನ್ಸಿಲರ್ ಸೂರ್ಯ ಡೇ ಅವರು ತಮ್ಮ ಹೆಸರನ್ನು ಸತ್ತ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಮಂಗಳವಾರ, ಟಿಎಂಸಿ ಕೌನ್ಸಿಲರ್ ಸೂರ್ಯ ಡೇ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಅವರು ಸ್ಮಶಾನದಲ್ಲಿ ಪ್ರತಿಭಟಿಸಿದರು. ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಅಗತ್ಯವಿರುವ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ್ದೇನೆ. ಎಣಿಕೆ ಫಾರ್ಮ್ ಅನ್ನು ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸಿದ್ದೆ. ಅಗತ್ಯ ದಾಖಲೆಗಳನ್ನು ಒದಗಿಸಿದ್ದೆ. ಆದಾಗ್ಯೂ ನನ್ನ ಹೆಸರನ್ನು ಮೃತರ ಪಟ್ಟಿಗೆ ಸೇರಿಸಲಾಗಿದೆ ಎಂದರು.
ಅಂತೆಯೇ ಇದು ಗಂಭೀರ ತಪ್ಪು ಎಂದು ಹೇಳಿದ ಅವರು, ಎಲ್ಲಾ ಔಪಚಾರಿಕತೆಗಳು ಪೂರ್ಣಗೊಂಡಿದ್ದರೂ, ಈ ತಪ್ಪು ಅಪಾಯಕಾರಿ ಆಡಳಿತಾತ್ಮಕ ಲೋಪ ಮತ್ತು ಬಹಳ ಗಂಭೀರ ವಿಷಯವಾಗಿದೆ ಎಂದರು.
ಈ ಪ್ರತಿಭಟನೆಯ ಭಾಗವಾಗಿ, ಟಿಎಂಸಿ ಕೌನ್ಸಿಲರ್ ತಮ್ಮ ಬೆಂಬಲಿಗರೊಂದಿಗೆ ಕೋಲ್ಕತ್ತಾ ಬಳಿಯ ಕಲಿಪುರ್ ಸ್ಮಶಾನಕ್ಕೆ ತೆರಳಿದರು. ಅಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗವು ದಾಖಲೆಗಳಲ್ಲಿ ನನ್ನನ್ನು ಸಾಯಿಸಿದೆ. ಹೀಗಾಗಿ ಅವರು ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಮತ್ತು ನನ್ನ ಅಂತ್ಯಕ್ರಿಯೆಗಳನ್ನು ನಡೆಸಬೇಕು ಎಂದು ಹೇಳಿದರು.
ತಾವು ಸ್ವತಃ ಸ್ಮಶಾನಕ್ಕೆ ನಡೆದುಕೊಂಡು ಹೋಗುತ್ತಿದ್ದೆವು, ಉಸಿರಾಡುತ್ತಿದ್ದೆವು, ಮಾತನಾಡುತ್ತಿದ್ದೆವು ಮತ್ತು ಪ್ರತಿಭಟಿಸುತ್ತಿದ್ದೆವು, ಆದರೆ ಕಾಗದಗಳ ಮೇಲೆ ನನ್ನನ್ನು ಸತ್ತಿದ್ದಾರೆಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು. ಕೌನ್ಸಿಲರ್ ಸೂರ್ಯ ಡೇ ಅವರ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಟಿಎಂಸಿ ವಕ್ತಾರ ಅರೂಪ್ ಚಕ್ರವರ್ತಿ ಕೂಡ ಈ ವಿಷಯದ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿ, ಇದು ಪ್ರಜಾಪ್ರಭುತ್ವದ ಅಣಕ ಎಂದು ಕಿಡಿಕಾರಿದ್ದಾರೆ.
ಅಂದಹಾಗೆ ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ, ಚುನಾವಣಾ ಆಯೋಗವು ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಿ ಕರಡು ಸಿದ್ಧಪಡಿಸಿದೆ. ಆಯೋಗವು ಒಟ್ಟು 5.8 ಮಿಲಿಯನ್ ಹೆಸರುಗಳನ್ನು ತೆಗೆದುಹಾಕಿದೆ. ಈ ಕರಡಿಗೆ ಆಕ್ಷೇಪಣೆ ಹೊಂದಿರುವವರು ಜನವರಿ 15 ರವರೆಗೆ ಇದರ ವಿರುದ್ಧ ದೂರು ಸಲ್ಲಿಸಬಹುದು.
Advertisement