

ನವದೆಹಲಿ: ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮಧ್ಯೆ ಹುಳಿ ಹಿಂಡುವ ಆರೋಪ ಈ ವರೆಗೂ ಅಮೆರಿಕ ವಿರುದ್ಧ ಕೇಳಿಬರುತ್ತಿತ್ತು. ಈಗ ಭಾರತ- ಅಮೆರಿಕ ನಡುವಿನ ಸಂಬಂಧ ಹಳ್ಳಹಿಡಿಸಲು ಚೀನಾ ಕುತಂತ್ರ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಭಾರತ ಮತ್ತು ವಾಷಿಂಗ್ಟನ್ ನಡುವಿನ ಆಳವಾದ ಕಾರ್ಯತಂತ್ರದ ಹೊಂದಾಣಿಕೆಯನ್ನು ತಡೆಯಲು ಭಾರತದೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆ (LAC)ಯಲ್ಲಿ ಕಡಿಮೆಯಾದ ಉದ್ವಿಗ್ನತೆಯನ್ನು ಬೀಜಿಂಗ್ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸುವ ಪೆಂಟಗನ್ ವರದಿಯನ್ನು ಚೀನಾ ಖಂಡಿಸಿದೆ.
"ಪೆಂಟಗನ್‌ನ ವರದಿ ಚೀನಾದ ರಕ್ಷಣಾ ನೀತಿಯನ್ನು ತಿರುಚಿ ಹೇಳುತ್ತಿದೆ, ಚೀನಾ ಮತ್ತು ಇತರ ದೇಶಗಳ ನಡುವೆ ಭಿನ್ನಾಭಿಪ್ರಾಯವನ್ನು ಬಿತ್ತುತ್ತದೆ ಮತ್ತು ಅಮೆರಿಕ ತನ್ನ ಮಿಲಿಟರಿ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ನೆಪವನ್ನು ಹುಡುಕುವ ಗುರಿಯನ್ನು ಹೊಂದಿದೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಚೀನಾದ ಮಿಲಿಟರಿ ಮತ್ತು ಭದ್ರತಾ ಬೆಳವಣಿಗೆಗಳ ಕುರಿತು ಯುಎಸ್ ಯುದ್ಧ ಇಲಾಖೆಯು ಕಾಂಗ್ರೆಸ್‌ಗೆ ಸಲ್ಲಿಸಿದ ಇತ್ತೀಚಿನ ವಾರ್ಷಿಕ ವರದಿಯ ಬಗ್ಗೆ ಕೇಳಿದಾಗ ವಕ್ತಾರರು ಈ ಹೇಳಿಕೆಯನ್ನು ನೀಡಿದ್ದಾರೆ. ಚೀನಾ ಈ ವರದಿಯನ್ನು ದೃಢವಾಗಿ ವಿರೋಧಿಸುತ್ತದೆ ಎಂದು ಲಿನ್ ತಿಳಿಸಿದ್ದಾರೆ.
ವರದಿಯು ಬೀಜಿಂಗ್‌ನ ದೀರ್ಘಕಾಲೀನ ಕಾರ್ಯತಂತ್ರದ ಮಹತ್ವಾಕಾಂಕ್ಷೆಗಳನ್ನು ವಿವರಿಸುತ್ತದೆ, ಇತ್ತೀಚಿನ ಉಲ್ಬಣವನ್ನು ಶಮನಗೊಳಿಸುವ ಪ್ರಯತ್ನಗಳ ಹೊರತಾಗಿಯೂ ಭಾರತವು ಚೀನಾದ ಉದ್ದೇಶಗಳ ಬಗ್ಗೆ ಎಚ್ಚರದಿಂದಿದೆ ಎಂದು ಹೇಳುತ್ತದೆ. "ಭಾರತ ಬಹುಶಃ ಚೀನಾದ ಕ್ರಮಗಳು ಮತ್ತು ಉದ್ದೇಶಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಲೇ ಇದೆ. ನಿರಂತರ ಪರಸ್ಪರ ಅಪನಂಬಿಕೆ ಮತ್ತು ಇತರ ಉದ್ರೇಕಕಾರಿಗಳು ದ್ವಿಪಕ್ಷೀಯ ಸಂಬಂಧವನ್ನು ಬಹುತೇಕ ಖಚಿತವಾಗಿ ಮಿತಿಗೊಳಿಸುತ್ತವೆ" ಎಂದು ಪೆಂಟಗನ್ ವರದಿ ಹೇಳಿದೆ.
ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಜಾಂಗ್ ಕ್ಸಿಯೋಗಾಂಗ್ ಪೆಂಟಗನ್ ವರದಿಯನ್ನು ಖಂಡಿಸಿದ್ದಾರೆ. ಇದು ರಕ್ಷಣಾ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಚೀನಾ ಮತ್ತು ಪಾಕಿಸ್ತಾನದ ನಡುವಿನ ಸಹಕಾರವನ್ನು ಮತ್ತು ಮಿಲಿಟರಿ ನೆಲೆಯನ್ನು ಸ್ಥಾಪಿಸುವ ಯೋಜನೆಯನ್ನು ಎತ್ತಿ ತೋರಿಸಿದೆ.
ಅಮೆರಿಕ ವರ್ಷಾನುವರ್ಷ ಇಂತಹ ವರದಿಗಳನ್ನು ಬಿಡುಗಡೆ ಮಾಡುತ್ತಿದೆ. ಚೀನಾದ ಆಂತರಿಕ ವ್ಯವಹಾರಗಳಲ್ಲಿ ತೀವ್ರವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಜಾಂಗ್ ಗಂಭೀರ ಆರೋಪ ಮಾಡಿದ್ದಾರೆ.
"ಅಮೆರಿಕದ ವರದಿ ಚೀನಾದ ರಾಷ್ಟ್ರೀಯ ರಕ್ಷಣಾ ನೀತಿಯನ್ನು ದುರುದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಿಕೊಂಡಿದೆ, ಚೀನಾದ ಮಿಲಿಟರಿ ಅಭಿವೃದ್ಧಿಯ ಬಗ್ಗೆ ಆಧಾರರಹಿತ ಊಹಾಪೋಹಗಳನ್ನು ಮಾಡಿದೆ, ಚೀನಾದ ಮಿಲಿಟರಿಯ ಸಾಮಾನ್ಯ ಕ್ರಮಗಳನ್ನು ನಿಂದಿಸಿದೆ ಮತ್ತು ಮಸಿ ಬಳಿದಿದೆ" ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ. ಚೀನಾ ಪಾಕಿಸ್ತಾನದೊಂದಿಗೆ ರಕ್ಷಣಾ ಮತ್ತು ಸಹಕಾರವನ್ನು ವಿಸ್ತರಿಸುತ್ತಿದೆ ಎಂದು ಆರೋಪಿಸಿರುವ ವರದಿಯ ಕುರಿತಾದ ಪ್ರಶ್ನೆಗೆ ನೇರವಾಗಿ ಪ್ರತಿಕ್ರಿಯಿಸಲು ಚೀನಾದ ವಕ್ತಾರರು ನಿರಾಕರಿಸಿದರು.
Advertisement