
ನವದೆಹಲಿ: ಕೇಂದ್ರ ಸರ್ಕಾರವು 2025-26ರ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಪರಿಸರ ಸಚಿವಾಲಯಕ್ಕೆ 3,412.82 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದು, ಇದು 2024-25ರಲ್ಲಿ 3,125.96 ಕೋಟಿ ರೂ.ಗಳಿಗಿಂತ ಅಂದರೆ ಶೇ. 9 ರಷ್ಟು ಹೆಚ್ಚಾಗಿದೆ.
ಪರಿಸರ ವ್ಯವಸ್ಥೆಯ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ ಮತ್ತು ಅರಣ್ಯ ವ್ಯಾಪ್ತಿಯನ್ನು ವಿಸ್ತರಿಸಲು ಬಜೆಟ್ ಹೆಚ್ಚಿನ ಹಣವನ್ನು ಮೀಸಲಿಟ್ಟಿದೆ. ಅರಣ್ಯ ವ್ಯಾಪ್ತಿಯನ್ನು ವಿಸ್ತರಿಸಲು, ಅಸ್ತಿತ್ವದಲ್ಲಿರುವ ಕಾಡುಗಳನ್ನು ರಕ್ಷಿಸಲು ಮತ್ತು ಕಾಡ್ಗಿಚ್ಚುಗಳನ್ನು ತಡೆಗಟ್ಟಲು ಕೆಲಸ ಮಾಡುವ ರಾಷ್ಟ್ರೀಯ ಹಸಿರು ಭಾರತ ಮಿಷನ್ 2025-26ರಲ್ಲಿ 220 ಕೋಟಿ ರೂ.ಗಳನ್ನು ಪಡೆಯಲಿದೆ, ಇದು ಕಳೆದ ವರ್ಷ 160 ಕೋಟಿ ರೂ. ಅನುದಾನ ಪಡೆದಿತ್ತು.
ಮಾತ್ರವಲ್ಲದೇ ನೈಸರ್ಗಿಕ ಸಂಪನ್ಮೂಲ ಮತ್ತು ಪರಿಸರ ವ್ಯವಸ್ಥೆಯ ಸಂರಕ್ಷಣೆಗಾಗಿ ಹಣವನ್ನು ಸಹ 30 ಕೋಟಿ ರೂ.ಗಳಿಂದ 50 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಘಟಕದ ಅಡಿಯಲ್ಲಿ, ಜೀವವೈವಿಧ್ಯ ಸಂರಕ್ಷಣೆಗಾಗಿ ಬಜೆಟ್ ಅನ್ನು ಸುಮಾರು ಮೂರು ಪಟ್ಟು ಹೆಚ್ಚಿಸಲಾಗಿದ್ದು, 3.5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
ಅಂತೆಯೇ ಜಲಚರ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸಲು ಸರ್ಕಾರವು 35 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, 2024-25ರಲ್ಲಿ ಈ ಪ್ರಮಾಣ 23.5 ಕೋಟಿ ರೂ.ಗಳಷ್ಟಿತ್ತು. ಅಲ್ಲದೆ ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಪ್ರಾಣಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವತ್ತ ಗಮನಹರಿಸುವ ನಿಧಿಯನ್ನು 245 ಕೋಟಿ ರೂ.ಗಳಿಂದ 290 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
Advertisement