
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ವಿಚಾರವಾಗಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿದ್ದು, ದೆಹಲಿ ಜನತೆ ಬದಲಾವಣೆ ಬಯಸಿ ಮತದಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಸೋಲಿನ ರುಚಿ ಕಂಡಿದ್ದು, ಬರೊಬ್ಬರಿ 26 ವರ್ಷಗಳ ಬಳಿಕ ಬಿಜೆಪಿ ದೆಹಲಿ ಆಡಳಿತ ಚುಕ್ಕಾಣಿ ಹಿಡಿಯುತ್ತಿದೆ. ದೆಹಲಿ ಚುನಾವಣಾ ಫಲಿತಾಂಶದ ಕುರಿತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿದ್ದು, 'ಆಮ್ ಆದ್ಮಿ ಪಕ್ಷದ ದುರಾಡಳಿತದಿಂದ ದೆಹಲಿ ಜನತೆ ಬೇಸತ್ತು ಹೋಗಿದ್ದರು. ಅವರು ಬದಲಾವಣೆ ಬಯಸುತ್ತಿದ್ದರು' ಎಂದು ಹೇಳಿದ್ದಾರೆ.
ಮೂರು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ, 'ದೆಹಲಿಯಲ್ಲಿ ಆಪ್ ಸರ್ಕಾರದ ಆಡಳಿತದಲ್ಲಿ ಯಾವುದೂ ಸೂಕ್ತವಾಗಿ ನಡೆಯುತ್ತಿರಲಿಲ್ಲ. ಅಲ್ಲಿನ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತು ಹೋಗಿದ್ದರು. ಹೀಗಾಗಿ ಬದಲಾವಣೆ ಬಯಸಿ ಚುನಾವಣೆಯಲ್ಲಿ ಮತ ಹಾಕಿದ್ದಾರೆ. ಗೆದ್ದ ಎಲ್ಲರಿಗೂ ನನ್ನ ಅಭಿನಂದನೆಗಳು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೋಲಿನ ಕುರಿತು
ಇದೇ ವೇಳೆ ತಮ್ಮ ಪಕ್ಷದ ಸೋಲಿನ ಕುರಿತು ಚುಟುಕಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕಾ, 'ನಮಗೆ ಉಳಿದವರಿಗೆ, ಇದರರ್ಥ ನಾವು ಹೆಚ್ಚು ಶ್ರಮಿಸಬೇಕು, ಅಲ್ಲೇ ಇರಬೇಕು, ನೆಲಮಟ್ಟದಲ್ಲಿರಬೇಕು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದರು.
ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿದ್ರಾ ಪ್ರಿಯಾಂಕಾ?
ಇನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿ ಮಾಡಿದ್ದು, ಪ್ರಿಯಾಂಕಾ ಗಾಂಧಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದರೇ? ಎಂಬ ಪ್ರಶ್ನೆ ಮೂಡುತ್ತಿದೆ. ಏಕೆಂದರೆ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಸೋತಿದ್ದು, ಸತತ ಮೂರನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಇದಾಗ್ಯೂ ಪಕ್ಷದ ಸೋಲಿನ ಕುರಿತು ಹೆಚ್ಚು ಮಾತನಾಡದ ಪ್ರಿಯಾಂಕಾ ಗಾಂಧಿ ಎಎಪಿ ಸೋಲು ಮತ್ತು ಬಿಜೆಪಿ ಗೆಲುವಿನ ಕುರಿತು ಮಾತನಾಡಿದ್ದಾರೆ ಎಂಬ ಚರ್ಚೆಗಳು ವ್ಯಕ್ತವಾಗುತ್ತಿವೆ.
Advertisement