
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶೇ 80ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರು ಸೇರಿದಂತೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಶನಿವಾರ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಎಎಪಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಜನತಾ ದಳ (ಯುನೈಟೆಡ್) ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಪಕ್ಷದ ಎಲ್ಲ ಅಭ್ಯರ್ಥಿಗಳು ಮತಗಳನ್ನು ಪಡೆದು ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 699 ಅಭ್ಯರ್ಥಿಗಳ ಪೈಕಿ 555 (ಶೇ 79.39) ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಸತತ ಮೂರನೇ ಅವಧಿಗೆ ಒಂದೇ ಒಂದು ಸೀಟು ಗೆಲ್ಲದ ಕಾಂಗ್ರೆಸ್‌ನ 67 ಅಭ್ಯರ್ಥಿಗಳು ತಮ್ಮ ಠೇವಣಿ ಹಣವನ್ನು ಕಳೆದುಕೊಂಡಿರುವುದು ಪಕ್ಷಕ್ಕೆ ಸಂಕಷ್ಟ ತಂದೊಡ್ಡಿದೆ. 2013ರವರೆಗೆ ಸತತ ಮೂರು ಅವಧಿಗೆ ದೆಹಲಿಯನ್ನು ಆಳಿದ ಕಾಂಗ್ರೆಸ್ ದೆಹಲಿಯ ಎಲ್ಲ 70 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಕಾಂಗ್ರೆಸ್‌ನ ಕಸ್ತೂರ್ಬಾ ನಗರ ಕ್ಷೇತ್ರದ ಅಭಿಷೇಕ್ ದತ್, ನಂಗ್ಲೋಯ್ ಜಾಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೋಹಿತ್ ಚೌಧರಿ ಮತ್ತು ಬದ್ಲಿಯಿಂದ ಕಣಕ್ಕಿಳಿದಿದ್ದ ದೇವೇಂದ್ರ ಯಾದವ್ ತಮ್ಮ ಠೇವಣಿ ಉಳಿಸಿಕೊಂಡಿದ್ದಾರೆ.
ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂನ ಶಿಫಾ-ಉರ್-ರೆಹಮಾನ್ ಖಾನ್ ಅವರು ಓಖ್ಲಾದಲ್ಲಿ ತಮ್ಮ ಠೇವಣಿ ಉಳಿಸಿಕೊಂಡಿದ್ದಾರೆ.
ಜನತಾ ಪ್ರಾತಿನಿಧ್ಯ ಕಾಯ್ದೆ, 1951ರ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುವ ಸಾಮಾನ್ಯ ವರ್ಗದ ಯಾವುದೇ ಅಭ್ಯರ್ಥಿಯು ಭದ್ರತಾ ಠೇವಣಿಯಾಗಿ ಚುನಾವಣಾ ಆಯೋಗಕ್ಕೆ 10,000 ರೂ. ಠೇವಣಿ ಇಡಬೇಕಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು 5,000 ರೂ. ಠೇವಣಿ ಇಡಬೇಕು.
ಚುನಾವಣೆಯ ನಿಯಮಗಳ ಪ್ರಕಾರ ಚಲಾವಣೆಯಾದ ಒಟ್ಟು ಮತಗಳಲ್ಲಿ 6ನೇ ಒಂದು ಭಾಗದಷ್ಟು ಮತ ಪಡೆಯಲು ಸಾಧ್ಯವಾಗದೇ ಇದ್ದರೆ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ 48 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಬರೋಬ್ಬರಿ 26 ವರ್ಷಗಳ ನಂತರ ಅಧಿಕಾರಕ್ಕೆ ಮರಳಿದೆ. ಇನ್ನುಳಿದಂತೆ ಎಎಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.
Advertisement