
ನವದೆಹಲಿ: ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆ ಹಿನ್ನೆಲೆಯಲ್ಲಿ ಬುಧವಾರದಿಂದ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಇನ್ವೆಸ್ಟ್ ಕರ್ನಾಟಕ 2025) ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಗಾಗಿ ಖರ್ಗೆ ಮತ್ತು ರಾಹುಲ್ ಗಾಂಧಿ ಇಬ್ಬರೂ ಸಂಸತ್ತಿನಲ್ಲಿ ಇದ್ದಾರೆ ಮತ್ತು ಕರ್ನಾಟಕ ಸರ್ಕಾರಕ್ಕೆ ತಮ್ಮ ಶುಭಾಶಯಗಳನ್ನು ಕಳುಹಿಸಿದ್ದಾರೆ ಎಂದಿದ್ದಾರೆ.
'ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಬ್ಬರೂ ಇಂದು ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯನ್ನು ಮುಂದುವರೆಸುವ ಕಾರಣದಿಂದಾಗಿ ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯುವ 'ಕರ್ನಾಟಕ ಹೂಡಿಕೆದಾರರ ಸಮಾವೇಶ'ದ ಉದ್ಘಾಟನೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ವಿಷಾದಿಸಿದ್ದಾರೆ' ಎಂದು ರಮೇಶ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಉಭಯ ನಾಯಕರು ಸಮಾವೇಶಕ್ಕೆ ತಮ್ಮ ಶುಭಾಶಯಗಳನ್ನು ಕಳುಹಿಸಿದ್ದಾರೆ ಮತ್ತು ಕರ್ನಾಟಕದ ವಿಶಿಷ್ಟ ಸ್ಪರ್ಧಾತ್ಮಕ ಮತ್ತು ತುಲನಾತ್ಮಕ ಅನುಕೂಲಗಳಿಗೆ ಅನುಗುಣವಾಗಿ ಇದು ಅತ್ಯಂತ ಉತ್ಪಾದಕ ಮತ್ತು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.
'ಇನ್ವೆಸ್ಟ್ ಕರ್ನಾಟಕ 2025' ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಫೆಬ್ರುವರಿ 12 ರಿಂದ 14 ರವರೆಗೆ 'ಮರುರೂಪಿಸುವ ಬೆಳವಣಿಗೆ' ಎಂಬ ಘೋಷಣೆಯೊಂದಿಗೆ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಹಲವಾರು ಉನ್ನತ ಕೈಗಾರಿಕೋದ್ಯಮಿಗಳು ಮತ್ತು ಕೆಲವು ಜಾಗತಿಕ ಹೂಡಿಕೆದಾರರು ಭಾಗವಹಿಸಲಿದ್ದಾರೆ.
ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿ ಕೇಂದ್ರವನ್ನಾಗಿ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ನೆರವಾಗುವ, ನಾವೀನ್ಯತೆ, ಕೈಗಾರಿಕಾ ಪ್ರಗತಿ ಮತ್ತು ಜಾಗತಿಕ ಪಾಲುದಾರಿಕೆಗೆ ರಾಜ್ಯದಲ್ಲಿನ ಸೌಲಭ್ಯಗಳನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಈ ಸಮಾವೇಶವನ್ನು ಆಯೋಜಿಸುತ್ತಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ಪ್ರಕಾರ, ಮೂರು ದಿನಗಳ ಸಮಾವೇಶದಲ್ಲಿ 19 ದೇಶಗಳ ಹೆಸರಾಂತ ಉದ್ಯಮಿಗಳು ಮತ್ತು ಅವರ ಪ್ರತಿನಿಧಿಗಳು ಭಾಗವಹಿಸಲಿದ್ದು, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ನಿರೀಕ್ಷೆ ಹೊಂದಲಾಗಿದೆ.
ಫೆಬ್ರುವರಿ 12 ರಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ.
Advertisement