
ಅಯೋಧ್ಯೆ: ವಾರಣಾಸಿಯಿಂದ ಅಯೋಧ್ಯೆಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ವೊಂದು ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ವಾರಣಾಸಿ-ಸುಲ್ತಾನ್‌ಪುರ ಹೆದ್ದಾರಿಯಲ್ಲಿ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಯಾತ್ರಿಕರು ಪಂಜಾಬ್‌ನವರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಮಿನಿ ಬಸ್ ಚಾಲಕ ತಾರಕೇಶ್ವರ್ ಸಿಂಗ್ (37) ಹಾಗೂ ಪ್ರಯಾಣಿಕ ಹರದಯಾಳ್ ಚಂದ್ (70) ಎಂದು ಗುರುತಿಸಲಾಗಿದೆ.
24 ಆಸನಗಳ ಮಿನಿ ಬಸ್ ವಾರಣಾಸಿಯಿಂದ ಅಯೋಧ್ಯೆಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದಾಗ ಅದನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ ಟ್ರೇಲರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಚಾಲಕ ವಾಹನದೊಳಗೆ ಸಿಕ್ಕಿಹಾಕಿಕೊಂಡಿದ್ದರು.
ಪೊಲೀಸರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸುವ ವೇಳೆಗೆ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಮತ್ತು ಪ್ರಯಾಣಿಕ ಇಬ್ಬರೂ ಸಾವನ್ನಪ್ಪಿದ್ದರು ಎಂದು ಸರ್ಕಲ್ ಅಧಿಕಾರಿ ಸರ್ದಾರ್ ದೇವೇಶ್ ಸಿಂಗ್ ಹೇಳಿದರು.
Advertisement