
ಅಮರಾವತಿ: ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಹಕ್ಕಿ ಜ್ವರ (Avian influenza) (bird flu) ಉಲ್ಬಣವಾಗಿದ್ದು, ಇದೀಗ ನೆರೆಯ ಮಹಾರಾಷ್ಟ್ರಕ್ಕೂ ಸೋಂಕು ಕಾಲಿಟ್ಟಿದೆ. ಈ ಮೂರು ರಾಜ್ಯಗಳಲ್ಲಿ ಒಟ್ಟಾರೆ 5 ಲಕ್ಷಕ್ಕೂ ಅಧಿಕ ಸೋಂಕು ಪೀಡಿತ ಕೋಳಿಗಳು ಮತ್ತು ಸಾವಿರಾರು ಮೊಟ್ಟೆಗಳನ್ನು ನಾಶಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಆಂಧ್ರ ಪ್ರದೇಶದ ಐದು ಹಳ್ಳಿಗಳ ಏಳು ಸ್ಥಳಗಳಿಂದ ಹಕ್ಕಿ ಜ್ವರ (ಪಕ್ಷಿ ಜ್ವರ) ವರದಿಯಾಗಿದ್ದು, ಎಲೂರು, ಎನ್‌ಟಿಆರ್, ಪಶ್ಚಿಮ ಗೋದಾವರಿ ಮತ್ತು ಇತರ ಜಿಲ್ಲೆಗಳಲ್ಲಿರುವ ಹೊಸ ಕೋಳಿ ಸಾಕಣೆ ಕೇಂದ್ರಗಳಿಗೆ ಈ ರೋಗ ಹರಡಿದೆ. ವೈರಸ್ ಹಲವಾರು ಪ್ರದೇಶಗಳ ಮೇಲೆ ಪರಿಣಾಮ ಬೀರಿರುವುದರಿಂದ ರಾಜ್ಯವು ಕಟ್ಟೆಚ್ಚರದಲ್ಲಿದೆ.
ಕರ್ನೂಲ್‌ನಲ್ಲಿರುವ ದೇಶೀಯ ಬಾತುಕೋಳಿ ಸಾಕಣೆ ಕೇಂದ್ರ, ಪೂರ್ವ ಗೋದಾವರಿ ಜಿಲ್ಲೆಯ ಕಾನೂರಿನಲ್ಲಿರುವ ಮೂರು ಕೋಳಿ ಸಾಕಣೆ ಕೇಂದ್ರಗಳು, ಎನ್‌ಟಿಆರ್ ಜಿಲ್ಲೆಯ ಗ್ಯಾಂಪಲಗುಡೆಮ್‌ನಲ್ಲಿರುವ ಒಂದು ಫಾರ್ಮ್, ಪಶ್ಚಿಮ ಗೋದಾವರಿ ಜಿಲ್ಲೆಯ ವೇಲ್ಪುರುವಿನಲ್ಲಿರುವ ಕೋಳಿ ಸಾಕಣೆ ಕೇಂದ್ರ ಮತ್ತು ಎಲೂರು ಜಿಲ್ಲೆಯ ಬಾದಂಪುಡಿಯಲ್ಲಿರುವ ಒಂದು ಫಾರ್ಮ್‌ನಲ್ಲಿ ಹಕ್ಕಿ ಜ್ವರ ವೈರಸ್ ಪತ್ತೆಯಾಗಿದೆ. ಈ ಏಕಾಏಕಿ ವ್ಯಾಪಕ ಮೇಲ್ವಿಚಾರಣೆ ಮತ್ತು ನಿಯಂತ್ರಣ ಕ್ರಮಗಳನ್ನು ಪ್ರಾರಂಭಿಸಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ರಾಜ್ಯ ಸರ್ಕಾರವು ತನ್ನ ಅಧಿಕೃತ ಕಾರ್ಯಪಡೆಗಳನ್ನು ಸಜ್ಜುಗೊಳಿಸಿದ್ದು, ರೋಗ ಹರಡುವಿಕೆಯನ್ನು ಮಿತಿಗೊಳಿಸಲು ಐದು ಕಂಟೈನ್‌ಮೆಂಟ್ ವಲಯಗಳನ್ನು ಘೋಷಿಸಿದೆ. ಈ ವಲಯಗಳಲ್ಲಿ ಜಾಗರೂಕತೆ ನಿರ್ಣಾಯಕವಾಗಿದೆ ಮತ್ತು ಅಧಿಕಾರಿಗಳು ಮತ್ತಷ್ಟು ಹರಡುವಿಕೆಯನ್ನು ನಿಯಂತ್ರಿಸಲು ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ, ಸುಮಾರು 5.20 ಲಕ್ಷ ಕೋಳಿಗಳು ಸೋಂಕಿನಿಂದ ಏಕಾಏಕಿ ಸಾವನ್ನಪ್ಪಿವೆ ಎಂದು ಹೇಳಲಾಗಿದೆ.
ಮನುಷ್ಯರಿಗೆ ಹರಿಡಿಲ್ಲ..
ಎಲೂರು ಜಿಲ್ಲೆಯಲ್ಲಿ ಹಕ್ಕಿ ಜ್ವರದ ಮಾನವ ಪ್ರಕರಣದ ವದಂತಿಗಳು ಹಬ್ಬಿದ್ದವು. ಆದಾಗ್ಯೂ, ಪಕ್ಷಿ ಜ್ವರದ ಯಾವುದೇ ಮಾನವ ಪ್ರಕರಣ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಆರೋಗ್ಯ ಇಲಾಖೆಯ ತಂಡವೊಂದು ಗ್ರಾಮಕ್ಕೆ ಭೇಟಿ ನೀಡಿ ವದಂತಿಗಳು ಸುಳ್ಳು ಎಂದು ದೃಢಪಡಿಸಿದೆ. ಪಶ್ಚಿಮ ಗೋದಾವರಿ ಜಿಲ್ಲಾ ಕಲೆಕ್ಟರ್ ವೆಟ್ರಿ ಸೆಲ್ವಿ ಈ ಬಗ್ಗೆ ಮಾತನಾಡಿದ್ದು, 'ನಿವಾಸಿಗಳು ಶಾಂತವಾಗಿರಲು ಮತ್ತು ಅಂತಹ ಪರಿಶೀಲಿಸದ ವರದಿಗಳನ್ನು ನಂಬದಂತೆ ಮನವಿ ಮಾಡಿದ್ದಾರೆ.
ಪಶುಸಂಗೋಪನಾ ನಿರ್ದೇಶಕ ಟಿ ದಾಮೋದರ್ ನಾಯ್ಡು ಅವರು ಈ ಬಗ್ಗೆ ಮಾತನಾಡಿದ್ದು, 'ರೋಗ ಹರಡುವುದನ್ನು ತಡೆಗಟ್ಟಲು ಈಗಾಗಲೇ ಸೋಂಕು ಪೀಡಿತ ಕೋಳಿ ಮತ್ತು ಇತರೆ ಪಕ್ಷಿಗಳನ್ನು ಕೊಲ್ಲುವ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಇದುವರೆಗೆ ಸುಮಾರು 1.50 ಲಕ್ಷ ಸೋಂಕಿತ ಪಕ್ಷಿಗಳನ್ನು ಕೊಲ್ಲಲಾಗಿದೆ. ಹೆಚ್ಚುವರಿಯಾಗಿ, ಸತ್ತ ಪಕ್ಷಿಗಳ ವಿಲೇವಾರಿ ಬಗ್ಗೆ ಕಳವಳ ವ್ಯಕ್ತವಾಗಿತ್ತು.
ಮೀನುಗಳಿಗೆ ಆಹಾರ ನೀಡಲು ಕೋಳಿ ಕಸವನ್ನು ಬಳಸುವುದು ಸಾಮಾನ್ಯ ಅಭ್ಯಾಸವಾಗಿತ್ತು. ಇದಕ್ಕೂ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಕೆಲವರು ಸತ್ತ ಪಕ್ಷಿಗಳನ್ನು ಮೀನು ಟ್ಯಾಂಕ್‌ಗಳಲ್ಲಿ ಎಸೆಯುತ್ತಿದ್ದಾರೆ ಎಂದು ವರದಿಯಾಗಿದೆ. ಸರಿಯಾದ ವಿಲೇವಾರಿ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದರು.
ಮಹಾರಾಷ್ಚ್ರಕ್ಕೂ ಹಬ್ಬಿದ ಸೋಂಕು, 7 ಸಾವಿರ ಕೋಳಿಗಳ ನಾಶ
ಇನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರಕ್ಕೂ ಹಕ್ಕಿ ಜ್ವರ ಸೋಂಕು ಹಬ್ಬಿದೆ ಎನ್ನಲಾಗಿದೆ. ಈ ವರ್ಷಾರಂಭದಿಂದ ಈ ವರೆಗೂ ಮಹಾರಾಷ್ಟ್ರದಾದ್ಯಂತ ಸುಮಾರು 7200ಕ್ಕೂ ಅಧಿಕ ಸೋಂಕು ಪೀಡಿತ ಕೋಳಿಗಳನ್ನು ಮತ್ತು 5 ಸಾವಿರಕ್ಕೂ ಅಧಿಕ ಮೊಟ್ಟೆಗಳನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ಸೋಂಕು ಪತ್ತೆಯಾದ 7 ಪೌಲ್ಟ್ರಿಗಳನ್ನು ಕಂಟೈನ್‌ಮೆಂಟ್ ವಲಯಗಳನ್ನಾಗಿ ಘೋಷಿಸಲಾಗಿದೆ. ಹೀಗೆ ಸೋಂಕು ಪತ್ತೆಯಾದ ಪೌಲ್ಟ್ರಿಗಳೆಲ್ಲವೂ ಸರ್ಕಾರದಿಂದ ಅನುಮತಿ ಪಡೆಯದ ಅಸಂಘಟಿತ ಕೋಳಿ ಸಾಕಣೆ ಕೇಂದ್ರಗಳಾಗಿದ್ದು, ಇಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬ್ರಹ್ಮಪುರಿ ತಾಲ್ಲೂಕಿನ ಮಂಗ್ಲಿ ಗ್ರಾಮದಿಂದ ಇತ್ತೀಚೆಗೆ ಹಕ್ಕಿ ಜ್ವರದ ಹರಡುವಿಕೆ ವರದಿಯಾಗಿತ್ತು.
ರಾಜ್ಯ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಪ್ರಕಾರ, ಮೊದಲ ಘಟನೆ ವರದಿಯಾದ ಪ್ರದೇಶದಿಂದ 5 ಕಿ.ಮೀ. ದೂರದ ಹಳ್ಳಿಗಳಲ್ಲಿ 2,065 ಪಕ್ಷಿಗಳು ಸಾವನ್ನಪ್ಪಿವೆ. ಕಾರ್ಯಾಚರಣೆಯ ಶಿಷ್ಟಾಚಾರದ ಪ್ರಕಾರ, ಮೊದಲ ಘಟನೆ ವರದಿಯಾದ ಪ್ರದೇಶದ 5 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ಪಕ್ಷಿಗಳು, ಮೊಟ್ಟೆಗಳು ಮತ್ತು ಪಶು ಆಹಾರವನ್ನು ನಾಶಪಡಿಸಬೇಕು ಎಂದು ಸೂಚಿಸಲಾಗಿದೆ. ಅಂತೆಯೇ ಚಂದ್ರಾಪುರ ಪ್ರಕರಣದಲ್ಲಿ, 1,165 ಮೊಟ್ಟೆಗಳು ಮತ್ತು 50 ಕೆಜಿ ಮೇವನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ವಾರ ಚಿಕನ್ ಬೇಡ ಎಂದ ಆಂಧ್ರ ಸರ್ಕಾರ
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಹಕ್ಕಿಜ್ವರ ವ್ಯಾಪಕವಾಗಿರುವಂತೆಯೇ ಉಭಯ ರಾಜ್ಯಗಳಲ್ಲಿ ಇನ್ನೊಂದು ವಾರ ಚಿಕನ್ ತಿನ್ನದಂತೆ ಸರ್ಕಾರ ಸಾರ್ವಜನಿಕರಿಗೆ ಮನವಿ ಮಾಡುತ್ತಿದೆ. ಆಟೋಗಳಲ್ಲಿ ಸಾರ್ವಜನಿಕ ಘೋಷಣೆ ಮಾಡಲಾಗುತ್ತಿದ್ದು ಸೋಂಕು ಹಿನ್ನಲೆಯಲ್ಲಿ ಕೋಳಿ, ಮೊಟ್ಟೆ ಮಾರಾಟ ಅಥವಾ ಖರೀದಿ ನಿಷೇಧಿಸಲಾಗಿದೆ. ಸಾರ್ವಜನಿಕರು ಇನ್ನೊಂದು ವಾರ ಚಿಕನ್ ಮೊಟ್ಟೆ ತಿನ್ನದಂತೆ ಮನವಿ ಮಾಡುತ್ತಿದೆ.
Advertisement