
ನವದೆಹಲಿ: ನಿಮ್ಮದೇ ಪಕ್ಷದ ಹಲವು ನಾಯಕರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ. ಟೀಕೆ ಮಾಡುವುದು ಬಿಟ್ಟು, ನಿಮ್ಮ-ನಿಮ್ಮ ಪಕ್ಷಗಳ ನೋಡಿಕೊಳ್ಳಿ ಎಂದು ವಿರೋಧ ಪಕ್ಷಗಳ ವಿರುದ್ಧ ದೆಹಲಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಪಕ್ಷ 15 ವರ್ಷಗಳ ಕಾಲ ಆಳ್ವಿಕೆ ನಡೆಸಿತು. ಆಮ್ ಆದ್ಮಿ ಪಕ್ಷ 13 ವರ್ಷಗಳ ಕಾಲ ಆಳ್ವಿಕೆ ನಡೆಸಿತು. ತಾವು ಏನು ಮಾಡಿದರು ಎಂಬುದನ್ನು ನೋಡುವುದು ಬಿಟ್ಟು, ಆಧಿಕಾರಕ್ಕೆ ಬಂದು ಒಂದು ದಿನದ ಸರ್ಕಾರವನ್ನು ಹೇಗೆ ಪ್ರಶ್ನಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಮೊದಲ ದಿನವೇ ಸಂಪುಟ ಸಭೆ ನಡೆಸಿದ್ದೇವೆ. ಆಮ್ ಆದ್ಮಿ ಪಕ್ಷ ತಡೆಹಿಡಿದಿದ್ದ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ಬರುವಂತೆ ಮಾಡಿದ್ದೇವೆ. ಮೊದಲ ದಿನವೇ ದೆಹಲಿಯ ಜನರಿಗೆ 10 ಲಕ್ಷ ರೂ.ಗಳ ಪ್ರಯೋಜನವನ್ನು ನೀಡಿದ್ದೇವೆ. ಅವರಿಗೆ ನಮ್ಮನ್ನು ಪ್ರಶ್ನಿಸುವ ಯಾವುದೇ ಹಕ್ಕಿಲ್ಲ ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೆಹಲಿಯ ಕಲ್ಯಾಣ ಕುರಿತ ಬಿಜೆಪಿಯ ಬದ್ಧತೆಯನ್ನು ಅವರು ಮತ್ತಷ್ಟು ಒತ್ತಿ ಹೇಳಿದರು. ನಾವೀದ ದೆಹಲಿಯ ಬಗ್ಗೆ ಚಿಂತಿಸುತ್ತೇವೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೆಹಲಿ ತನ್ನ ಹಕ್ಕುಗಳನ್ನು ಪಡೆಯುತ್ತದೆ ಎಂದು ಹೇಳಿದರು.
ಬಳಿಕ ಕಾಂಗ್ರೆಸ್ ಮತ್ತು ಎಎಪಿಯನ್ನು ಟೀಕಿಸಿದ ಅವರು, ಅವರು ಮೊದಲು ತಮ್ಮ ತಮ್ಮ ಪಕ್ಷಗಳನ್ನು ನೋಡಿಕೊಳ್ಳಲಿ. ಸಾಕಷ್ಟು ಮಂದಿ ಪಕ್ಷಗಳ ತೊರೆಯಲು ಬಯಸಿದ್ದಾರೆ. ಸಿಎಜಿ ವರದಿಯನ್ನು ಸದನದಲ್ಲಿ ಮಂಡಿಸಿದಾಗ ಹಲವರ ಬಂಡವಾಳ ಬಯಲಾಗುತ್ತದೆ. ಇದರಿಂದ ಚಿಂತಿತರಾಗಿದ್ದಾರೆಂದು ವ್ಯಂಗ್ಯವಾಡಿದರು.
ಯಮುನಾ ನದಿಯ ದಡದಲ್ಲಿ ಸಂಜೆ ಆರತಿಯಲ್ಲಿ ಭಾಗವಹಿಸಿದ ನಂತರ, ಯಮುನಾ ನದಿಯನ್ನು ಶುದ್ಧೀಕರಿಸುವ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಇದು ದೆಹಲಿ ಸರ್ಕಾರದ ಆದ್ಯತೆಯಾಗಿರುತ್ತದೆ ಎಂದು ತಿಳಿಸಿದರು.
Advertisement