
ಹೈದರಾಬಾದ್: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಶಾಲೆಯ ಹೊರಭಾಗದಲ್ಲಿಯೇ ಮೃತಪಟ್ಟಿದ್ದಾರೆ.
ಸಂತ್ರಸ್ತೆಯನ್ನು 16 ವರ್ಷದ ಶ್ರೀನಿಧಿ ಎಂದು ಗುರುತಿಸಲಾಗಿದ್ದು, ರಾಮರೆಡ್ಡಿ ಮಂಡಲದ ಸಿಂಗರಾಯಪಲ್ಲಿ ಗ್ರಾಮದವರು. ಖಾಸಗಿ ಶಾಲೆಯಲ್ಲಿ ಓದಲೆಂದು ಕಾಮರೆಡ್ಡಿಯಲ್ಲಿ ವಾಸಿಸುತ್ತಿದ್ದರು. ಶಾಲೆಯ ಬಳಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯ ಶಿಕ್ಷಕಿಯೊಬ್ಬರು ಆಕೆಯನ್ನು ಗಮನಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಸಿಪಿಆರ್ ಸೇರಿದಂತೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ. ಆದರೆ, ಆಕೆ ಪ್ರತಿಕ್ರಿಯಿಸದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಶ್ರೀನಿಧಿ ಹೃದಯಾಘಾತದಿಂದ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿದ್ಯಾರ್ಥಿನಿ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಆಕೆಯ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದೆ.
ಅಲಿಘರ್‌ನ ಸಿರೌಲಿ ಗ್ರಾಮದ 6 ನೇ ತರಗತಿ ವಿದ್ಯಾರ್ಥಿ ಮೋಹಿತ್ ಚೌಧರಿ ಹೃದಯಾಘಾತದಿಂದ ಸಾವಿಗೀಡಾದ ತಿಂಗಳ ನಂತರ ಶ್ರೀನಿಧಿಯ ಸಾವು ಸಂಭವಿಸಿದೆ. 14 ವರ್ಷದ ಬಾಲಕ ವಾರ್ಷಿಕ ಕ್ರೀಡಾ ದಿನದ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದು, ಅಭ್ಯಾಸದ ವೇಳೆ ಕುಸಿದು ಬಿದ್ದಿದ್ದಾನೆ.
ಅದೇ ಜಿಲ್ಲೆಯ ಮತ್ತೊಂದು ಮಗು ಎಂಟು ವರ್ಷದ ದೀಕ್ಷಾ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಹೃದಯಾಘಾತದಿಂದ ಸಾವಿಗೀಡಾಗಿದ್ದಳು.
Advertisement