
ತಿರುವನಂತಪುರಂ: ಕಾಂಗ್ರೆಸ್ ಮತ್ತು ಶಶಿ ತರೂರ್ ನಡುವೆ ಬಿರುಕು ಮೂಡಿದೆ ಎನ್ನುವ ವರದಿಗಳ ನಡುವೆ, ಶಶಿ ತರೂರ್ ಇದೀಗ ರಹಸ್ಯವಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮದ ಎಕ್ಸ್‌ನಲ್ಲಿ ಶನಿವಾರ, ಇಂಗ್ಲಿಷ್ ಕವಿ ಥಾಮಸ್ ಗ್ರೇ ಅವರ 'ಅಜ್ಞಾನವೇ ಆನಂದವಾಗಿರುವಲ್ಲಿ, 'ಬುದ್ಧಿವಂತಿಕೆಯು ಮೂರ್ಖತನವಾಗಿದೆ' ಎಂದಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ದಿನದ ಚಿಂತನೆ ಎಂದು ಶೀರ್ಷಿಕೆ ನೀಡಿದ್ದಾರೆ.
ತರೂರ್ ಅವರು ಕೇರಳ ಸರ್ಕಾರದ ನೀತಿಗಳನ್ನು ಶ್ಲಾಘಿಸಿದ ಲೇಖನ ಮತ್ತು ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯನ್ನು ಕೂಡ ಶ್ಲಾಘಿಸಿದ್ದಾರೆ ಎಂದು ವರದಿಯಾಗಿದ್ದು, ಇದೀಗ ಶಶಿ ತರೂರ್ ಮತ್ತು ಕಾಂಗ್ರೆಸ್ ನಡುವೆ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಈ ಬೆನ್ನಲ್ಲೇ ಅವರು ರಹಸ್ಯವಾದ ಪೋಸ್ಟ್ ಹಂಚಿಕೊಂಡಿದ್ದಾರೆ.
ತಮ್ಮ ಹೇಳಿಕೆಗಳನ್ನು ಸ್ಪಷ್ಟಪಡಿಸಿದ ತರೂರ್ ಸುದ್ದಿಸಂಸ್ಥೆ ANI ಜೊತೆಗೆ ಮಾತನಾಡಿ, 'ನಾನು 16 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಮ್ಮ ಸರ್ಕಾರವಾಗಲಿ ಅಥವಾ ಬೇರೆ ಪಕ್ಷದ ಸರ್ಕಾರವಾಗಲಿ, ಯಾರಾದರೂ ಒಳ್ಳೆಯದನ್ನು ಮಾಡಿದಾಗ ಅದನ್ನು ಒಪ್ಪಿಕೊಳ್ಳಬೇಕು ಮತ್ತು ಹೊಗಳಬೇಕು. ಅದೇ ವೇಳೆ ಅವರು ಕೆಟ್ಟದ್ದನ್ನು ಮಾಡಿದಾಗ ಟೀಕಿಸಬೇಕು ಎಂಬುದು ನನ್ನ ನಿಲುವು' ಎಂದಿದ್ದಾರೆ.
ಸದ್ಯದ ಎಡಪಂಥೀಯ ಆಡಳಿತದ ಅಡಿಯಲ್ಲಿ ಕೇರಳದ ಉದ್ಯಮಶೀಲತೆಯ ಬೆಳವಣಿಗೆಯನ್ನು ತಮ್ಮ ಲೇಖನವು ಹೊಗಳಿದೆಯೇ ಹೊರತು ಸರ್ಕಾರವನ್ನಲ್ಲ. 'ಇನ್ನೂ ಮಾಡಬೇಕಾಗಿರುವುದು ಇದೆ. ಆದರೆ, ಯಾವುದೋ ಒಂದು ಪ್ರದೇಶದಲ್ಲಿ ಒಳ್ಳೆಯ ಸಂಗತಿಗಳು ಹೊರಹೊಮ್ಮಿದಾಗ ಅದನ್ನು ಒಪ್ಪಿಕೊಳ್ಳದಿರುವುದು ಸಣ್ಣತನ. ನನ್ನ ಹೊಗಳಿಕೆ ಮುಖ್ಯವಾಗಿ ಗ್ಲೋಬಲ್ ಸ್ಟಾರ್ಟ್‌ಅಪ್ ಇಕೋಸಿಸ್ಟಮ್ ವರದಿ 2024 ಮತ್ತು ಲೇಖನದಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಸಂಗತಿಗಳು ಮತ್ತು ಅಂಕಿಅಂಶಗಳ ಮೇಲೆ ಆಧರಿಸಿದೆ' ಎಂದು ತಿಳಿಸಿದ್ದಾರೆ.
'ಅಂತಿಮ ಕೋರಿಕೆ ಏನೆಂದರೆ, ಒಂದು ಸಾಲಿನ ಸಾರಾಂಶದ ಬಗ್ಗೆ ಕಾಮೆಂಟ್ ಮಾಡುವ ಮೊದಲು ನೀವು ಲೇಖನವನ್ನು ಓದಿ! ಅದರಲ್ಲಿ ಪಕ್ಷ ರಾಜಕೀಯವನ್ನು ಉಲ್ಲೇಖಿಸಿಲ್ಲ. ಆದರೆ, ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಕೇರಳ ಮಾಡಬೇಕಾದ ವಿಷಯಗಳ ಬಗ್ಗೆ ಮಾತನಾಡುತ್ತದೆ. ನನ್ನ 16 ವರ್ಷಗಳ ರಾಜಕೀಯದಲ್ಲಿ ನಾನು ರಾಜ್ಯದಲ್ಲಿ ಬದಲಾವಣೆಗಳನ್ನು ಬಯಸುತ್ತಿದ್ದೇನೆ' ಎಂದರು.
ಕಾಂಗ್ರೆಸ್ ಪಕ್ಷದೊಳಗೆ ತಮ್ಮ ಪಾತ್ರದ ಬಗ್ಗೆ ಸ್ಪಷ್ಟತೆ ನೀಡದಿರುವುದು ಮತ್ತು ತಮ್ಮನ್ನು ನಿರ್ಲಕ್ಷ್ಯಿಸಿರುವ ಬಗ್ಗೆ ತರೂರ್ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳೂ ಇವೆ. ಎಐಸಿಸಿ ಮೂಲಗಳನ್ನು ಉಲ್ಲೇಖಿಸಿರುವ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಗ್ಗೆ ಕೂಡ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.
ಶಶಿ ತರೂರ್ ಅವರ ಲೇಖನದ ಕುರಿತು ಪಕ್ಷದ ಕೇರಳ ಘಟಕದಿಂದ ಟೀಕೆಗಳು ವ್ಯಕ್ತವಾದ ನಂತರ ರಾಹುಲ್ ಗಾಂಧಿ ಅವರನ್ನು ಮಂಗಳವಾರ ಶಶಿ ತರೂರ್ ಭೇಟಿಯಾಗಿದ್ದರು. ರಾಹುಲ್ ಗಾಂಧಿ ಅವರೊಂದಿಗೆ "ತುಂಬಾ ಒಳ್ಳೆಯ" ಮಾತುಕತೆ ನಡೆಸಿದ್ದೇನೆ ಎಂದು ತರೂರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಪಕ್ಷದಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಬಗ್ಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ತರೂರ್, 'ನಾನು ಯಾರ ವಿರುದ್ಧವೂ ದೂರು ನೀಡಿಲ್ಲ' ಎಂದು ಉತ್ತರಿಸಿದರು.
Advertisement