
ನವದೆಹಲಿ: ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದೊಳಗೆ ಸುಮಾರು 2,000 ಚದರ ಅಡಿ ಅಳತೆಯ ಅಕ್ಕಪಕ್ಕದ ನಿವೇಶನಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕವನ್ನು ನಿರ್ಮಿಸಲು ಅವರ ಕುಟುಂಬದಿಂದ ಅನುಮೋದನೆಗಾಗಿ ಕಾಯುತ್ತಿದ್ದಾರೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳ ಭೇಟಿಯ ನಂತರ ಸಿಬ್ಬಂದಿ ಸ್ಥಳಗಳನ್ನು ಸ್ವಚ್ಛಗೊಳಿಸಿ ಅಲ್ಲಿರುವ ಹುಲ್ಲನ್ನು ಕತ್ತರಿಸಿ ತೆಗೆದಿದ್ದಾರೆ. ಸ್ಮಾರಕ ನಿರ್ಮಾಣದ ಅಂದಾಜು ಸಿದ್ಧಪಡಿಸಲಾಗಿದ್ದು ಮನಮೋಹನ್ ಸಿಂಗ್ ಅವರ ಕುಟುಂಬದಿಂದ ಮಾಹಿತಿ ಸಿಕ್ಕಿದ ನಂತರ ಹಂಚಿಕೆ ಔಪಚಾರಿಕತೆಯನ್ನು ಪ್ರಾರಂಭಿಸಲಾಗುತ್ತದೆ.
ಸುಮಾರು 45 ಎಕರೆಗಳಲ್ಲಿ ಹರಡಿರುವ ರಾಷ್ಟ್ರೀಯ ಸ್ಮೃತಿ ಸ್ಥಳ ಸಂಕೀರ್ಣವು ಯಮುನಾ ದಂಡೆಯ ಉದ್ದಕ್ಕೂ ರಿಂಗ್ ರೋಡ್ ಮತ್ತು ಸಲೀಂಘರ್ ಬೈಪಾಸ್ ನಡುವೆ ಇದೆ. ಈ ಎರಡು ತಾಣಗಳು ಪಿ ವಿ ನರಸಿಂಹ ರಾವ್ ಅವರ ಸ್ಮಾರಕದ ಪಕ್ಕದಲ್ಲಿವೆ. ಅವುಗಳು ಸುಸಜ್ಜಿತ ಹಾದಿಗಳಿಂದ ಸುತ್ತುವರಿದಿವೆ. ಮಾಜಿ ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಾದ ಜೈಲ್ ಸಿಂಗ್, ಶಂಕರ್ ದಯಾಳ್ ಶರ್ಮಾ, ಆರ್ ವೆಂಕಟರಾಮನ್, ಕೆ ಆರ್ ನಾರಾಯಣನ್, ಚಂದ್ರ ಶೇಖರ್ ಮತ್ತು ಐ ಕೆ ಗುಜ್ರಾಲ್ ಅವರ ಸ್ಮಾರಕಗಳಿಂದ ಸುತ್ತುವರಿದಿದೆ. ಈ ಸ್ಥಳದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆ ನಡೆದ ಸದೈವ್ ಅಟಲ್ ಸ್ಮಾರಕ ಉದ್ಯಾನವನವಿದೆ.
ಮನಮೋಹನ್ ಸಿಂಗ್ ಅವರ ಕುಟುಂಬದಿಂದ ಅನುಮೋದನೆ ಪಡೆದ ನಂತರ ಅವರ ಸ್ಮಾರಕ ನಿರ್ಮಾಣ ಮತ್ತು ನಿರ್ವಹಣೆಗಾಗಿ ಸ್ಥಾಪಿಸಲಾಗುವ ಟ್ರಸ್ಟ್‌ಗೆ ಸರ್ಕಾರ ಭೂಮಿಯನ್ನು ಮಂಜೂರು ಮಾಡಲು ನಿರ್ಧರಿಸಿದೆ ಎಂದು ಹೇಳಿದರು. ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಸ್ಥಾಪಿಸಲಾಗುವ ಟ್ರಸ್ಟ್ ಸ್ಮಾರಕವನ್ನು ನಿರ್ಮಿಸುತ್ತದೆ. ಕುಟುಂಬದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ. ಹಂಚಿಕೆ ಮಾತುಕತೆಗೆ ಒಂದು ವಾರ ತೆಗೆದುಕೊಳ್ಳಬಹುದು. ಅಟಲ್ ಬಿಹಾರಿ ವಾಜಪೇಯಿ ಪ್ರಕರಣದಲ್ಲಿ ಅವರ ಹೆಸರಿನಲ್ಲಿ ಈಗಾಗಲೇ ಟ್ರಸ್ಟ್ ಅಸ್ತಿತ್ವದಲ್ಲಿತ್ತು. ಮನಮೋಹನ್ ಸಿಂಗ್ ಸ್ಮಾರಕದ ಸ್ಥಳದ ಬಗ್ಗೆ ಕುಟುಂಬಕ್ಕೆ ತಿಳಿಸಲು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರಿಗೆ ಕಾರ್ಯ ವಹಿಸಲಾಗಿತ್ತು.
ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಡಿಸೆಂಬರ್ 26 ರಂದು ನಿಧನರಾದರು. ಅವರ ಅಂತ್ಯಕ್ರಿಯೆ ಮೂರು ದಿನಗಳ ನಂತರ ನಿಗಮಬೋಧ ಘಾಟ್‌ನಲ್ಲಿ ನಡೆಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಮಾರಕಕ್ಕೆ ಜಾಗ ಕೋರಿದ ಬಳಿಕ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಯಿತು. 2013 ರಲ್ಲಿ, ಸ್ಥಳದ ಕೊರತೆಯಿಂದಾಗಿ ರಾಜ್‌ಘಾಟ್ ಬಳಿ ಗಣ್ಯರಿಗೆ ಪ್ರತ್ಯೇಕ ಸ್ಮಾರಕಗಳನ್ನು ನೀಡದಿರಲು ಅಂದಿನ ಸರ್ಕಾರ ನಿರ್ಧರಿಸಿತ್ತು.
Advertisement