
ಮೀರತ್: ಉತ್ತರ ಭಾರತದಲ್ಲಿ ಮಾಂಜಾ ಹಾವಳಿ ಮಿತಿ ಮೀರಿದ್ದು, ಇದೀಗ ಚೈನೀಸ್ ಮಾಂಜಾ ಮತ್ತೋರ್ವ ಯುವಕ ಕತ್ತು ಸೀಳಿ ಕೊಂದು ಹಾಕಿದೆ.
ಹೌದು.. ಈಗಂತೂ ಚಳಿಗಾಲ.. ಗಾಳಿ ವ್ಯಾಪಕವಾಗಿರುತ್ತೆ.. ಅಂತೆಯೇ ಉತ್ತರ ಭಾರತದಲ್ಲಿ ಗಾಳಿಪಟ ಹಾರಿಸುವ ಕ್ರೀಡೆ ಕೂಡ ವ್ಯಾಪಕವಾಗಿದ್ದು, ಈ ಗಾಳಿಪಟ ಹಾರಿಸುವಿಕೆಯಲ್ಲಿ ಬಳಸುವ ಮಾರಕ ಚೈನೀಸ್ ಮಾಂಜಾ ಇದೀಗ ಮತ್ತೆ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿ ಇದೇ ಚೈನೀಸ್ ಮಾಂಜಾ ದಾರಕ್ಕೆ ತಗುಲಿ ಯುವಕನೋರ್ವನ ಕತ್ತು ಸೀಳಿ ಸಾವಿಗೀಡಾಗಿರುವ ಧಾರುಣ ಘಟನೆ ವರದಿಯಾಗಿದೆ.
ಮೃತ ಯುವಕನನ್ನು 22 ವರ್ಷದ ಸುಹೇಲ್ ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಶಾಪಿಂಗ್ ತೆರಳಿ ವಾಪಸ್ ಆಗುತ್ತಿದ್ದಾಗ ಗಾಜು ಲೇಪಿತ ಗಾಳಿಪಟದ ದಾರ ಆತನ ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿದ್ದಾನೆ. ವಿಚಾರ ತಿಳಿಯುತ್ತಲೇ ಆಗಮಿಸಿದ ಮೀರತ್ ಪೊಲೀಸರು ಸಂತ್ರಸ್ತನ ಬೈಕ್ ವಶಪಡಿಸಿಕೊಂಡು ಗಾಯಗೊಂಡ ಮತ್ತೋರ್ವ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಂಜಾದಾರ ಖರೀದಿಸಿ ವಾಪಸ್ ಆಗುತ್ತಿದ್ದ ಯುವಕರು
ವಿಪರ್ಯಾಸವೆಂದರೆ ಯಾವ ಚೈನೀಸ್ ಮಾಂಜಾಗೆ ಯುವಕ ಸುಹೇಲ್ ಬಲಿಯಾದನೇ ಅದೇ ಮಾಂಜಾ ದಾರವನ್ನು ಖರೀದಿಸಿ ವಾಪಸ್ ಆಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಸುಹೇಲ್ ಮತ್ತು ಆತನ ಸ್ನೇಹಿತ ನವಾಜಿಶ್ ಗಾಳಿಪಟ ಮತ್ತು ಮಾಂಜಾ ದಾರ ಖರೀದಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ಮಾರ್ಗಮಧ್ಯೆ ಚೈನೀಸ್ ಮಾಂಜಾದಾರ ಸುಹೇಲ್ ನ ಕತ್ತು ಸೀಳಿದೆ. ಇದೇ ವೇಳೆ ನವಾಜಿತ್ ಗೂ ಗಾಯವಾಗಿದೆ. ಆದರೆ ಬೈಕ್ ನ ಹಿಂಬದಿಯಲ್ಲಿದ್ದರಿಂದ ಆತ ಸಣ್ಣಪುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಪೊಲೀಸರು ಬೈಕ್ ಪರಿಶೀಲನೆ ವೇಳೆ ಯುವಕರು ಮಾಂಜಾದಾರ ಖರೀದಿಸಿರುವುದು ಬೆಳಕಿಗೆ ಬಂದಿದೆ.
ಏನಿದು ಚೈನೀಸ್ ಮಾಂಜಾ?
ಚೈನೀಸ್ ಮಾಂಜಾ ಎಂದು ಕರೆಯಲ್ಪಡುವ ಗಾಜು- ಅಥವಾ ನೈಲಾನ್-ಲೇಪಿತ ದಾರಗಳು ಈ ರೀತಿಯ ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತವೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಇವುಗಳನ್ನು ನಿಷೇಧಿಸಲಾಗಿದೆ. ಆದರೂ ಕೆಲ ವ್ಯಾಪಾರಿಗಳು ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಉತ್ತರ ಭಾರತದ ರಾಜ್ಯಗಳಲ್ಲಿ ಚಳಿಗಾಲದಲ್ಲಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಚೈನೀಸ್ ಮಾಂಜಾ ಖರೀದಿ ಅಥವಾ ಮಾರಾಟಕ್ಕೆ ಕಠಿಣ ಕಾನೂನುಗಳನ್ನು ರೂಪಿಸಲಾಗಿದ್ದು, ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆಯ ಪ್ರಕರಣವನ್ನು ದಾಖಲಿಸುವ ಹಕ್ಕು ಪೊಲೀಸರಿಗಿದೆ.
ಪೊಲೀಸ್ ದಾಳಿ ವ್ಯಾಪಕ ಮಾಂಜಾ ವಶಕ್ಕೆ
ಇನ್ನು ಈ ಮಾಂಜಾದಾರಕ್ಕೆ ಯುವಕ ಬಲಿಯಾದ ಬೆನ್ನಲ್ಲೇ ಮೀರತ್ ನಲ್ಲಿ ದಾಳಿ ನಡೆಸಿದ ಪೊಲೀಸರು ಚೀನೀ ಮಾಂಜಾವನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೆ ಮಾಂಜಾ ಮಾರಾಟದ ಆರೋಪದ ಮೇರೆಗೆ ಮೂವರು ವ್ಯಾಪಾರಿಗಳನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಅಪಾರ ಪ್ರಮಾಣದ ಚೀನಾ ಮಾಂಜಾ ತುಂಬಿದ್ದ ಮೂರು ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ದಾಳಿಯಲ್ಲಿ ಇಬ್ಬರನ್ನು ಬಂಧಿಸಿ ಮೂರು ಗೋಣಿ ಚೀಲಗಳನ ಮಾಂಜಾ ವಶಪಡಿಸಿಕೊಂಡಿದ್ದಾರೆ.
ಹರಿದ್ವಾರದಲ್ಲೂ ಘಟನೆ
ಮೀರತ್ ಗಿಂತ ಮುಂಚೆ ಹರಿದ್ವಾರದಲ್ಲಿ ಇಂತಹದೇ ಘಟನೆಯಲ್ಲಿ ಬೈಕ್ ಸವಾರನೊಬ್ಬ ಚೈನೀಸ್ ಮಾಂಜಾದಿಂದ ಉಂಟಾದ ಅಪಘಾತದಲ್ಲಿ ಸಾವನ್ನಪ್ಪಿದ್ದ. ನಲವತ್ತು ವರ್ಷದ ಅಶೋಕ್ ಕುಮಾರ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆಗೆ ಸಿಕ್ಕಿ ಶ್ವಾಸನಾಳಕ್ಕೆ ಹಾನಿಯಾಗಿ ಸಾವನ್ನಪ್ಪಿದ್ದ. ಇವು ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಸಾವುಗಳು ಸಂಭವಿಸಿವೆ, ಆದರೆ ಭಯಾನಕ ಗಾಳಿಪಟ-ದಾರದ ಬಳಕೆ ಮುಂದುವರೆದಿದೆ.
ಗಾಳಿಪಟ ಹಾರಿಸುವ ಸೀಸನ್ ಸಮೀಪಿಸುತ್ತಿರುವಂತೆಯೇ, ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಪೊಲೀಸರು ಚೈನೀಸ್ ಮಾಂಜಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಹರಿದ್ವಾರದ ಸಾವಿನ ನಂತರ, ಪೊಲೀಸರು 170 ಚೀನೀ ಮಾಂಜಾದ ಪೆಟ್ಟಿಗೆಗಳನ್ನು ವಶಪಡಿಸಿಕೊಂಡರು.
Advertisement