
ನಾಸಿಕ್: ಟಿಳಕವಾಡಿ ಪ್ರದೇಶದಲ್ಲಿ 50ರ ಹರೆಯದ ದಂಪತಿಗಳು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೃತರನ್ನು 58 ವರ್ಷದ ಜಯೇಶ್ ರಸಿಕ್ಲಾಲ್ ಶಾ ಮತ್ತು ಪತ್ನಿ 55 ವರ್ಷದ ರಕ್ಷಾ ಜಯೇಶ್ ಶಾ ಎಂದು ಗುರುತಿಸಲಾಗಿದೆ. ತಮ್ಮ ಕಿರಿಯ ಮಗನ ಮದುವೆಗೆ ಇನ್ನೇನು ಕೆಲ ದಿನಗಳು ಬಾಕಿ ಇರುವಂತೆ ದಂಪತಿಗಳು ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ.
ಭಾನುವಾರ ಸಂಜೆ ಸಂಬಂಧಿಕರೊಂದಿಗೆ ಊಟದ ನಂತರ, ಜಯೇಶ್ ಮತ್ತು ರಕ್ಷಾ ವಿಷಕಾರಿ ಪದಾರ್ಥವನ್ನು ಸೇವಿಸಿದ್ದಾರೆ ಎನ್ನಲಾಗಿದೆ. ಇನ್ನು ತಮ್ಮ ಹಿರಿಯ ಮಗ ಮತ್ತು ಆತನ ಹೆಂಡತಿ ಊರಿಂದ ಹೊರಗಿದ್ದಾಗ ಈ ಘಟನೆ ನಡೆದಿದ ಎಂದು ಅಧಿಕಾರಿ ತಿಳಿಸಿದ್ದಾರೆ. ಕಿರಿಯ ಮಗ ಮನೆಗೆ ಬಂದು ನೋಡಿದಾಗ ದಂಪತಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಆತಂಕಗೊಂಡಿದ್ದಾನೆ.
ಕೂಡಲೇ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಸೋಮವಾರ ಮುಂಜಾನೆ 2 ಗಂಟೆ ಸುಮಾರಿಗೆ ದಂಪತಿಗಳು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಮತ್ತು ಸರ್ಕಾರವಾಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement