
ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯ ಎಲ್ಲ ಕೊಳೆಗೇರಿಗಳನ್ನು ಕೆಡವಲಿದೆ. ಬಿಜೆಪಿಯು ಸ್ಲಂ ನಿವಾಸಿಗಳ ಕಲ್ಯಾಣಕ್ಕಿಂತ ಭೂಸ್ವಾಧೀನಕ್ಕೆ ಆದ್ಯತೆ ನೀಡುತ್ತಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
ಇಲ್ಲಿನ ಶಕುರ್ ಬಸ್ತಿ ಪ್ರದೇಶದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಅವರಿಗೆ (ಬಿಜೆಪಿ) ಮೊದಲು ನಿಮ್ಮ ಮತಗಳು ಮತ್ತು ಚುನಾವಣೆಯ ನಂತರ ನಿಮ್ಮ ಭೂಮಿ ಮಾತ್ರ ಬೇಕು ಎಂದು ಆರೋಪಿಸಿದರು.
ಬಿಜೆಪಿಯ 'ಜಹಾನ್ ಝುಗ್ಗಿ ವಾಹನ್ ಮಕಾನ್' ಯೋಜನೆಯನ್ನು ಟೀಕಿಸಿದ ಅವರು, ಇದು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಕಳೆದ ಐದು ವರ್ಷಗಳಲ್ಲಿ, ಅವರು ಕೊಳೆಗೇರಿ ನಿವಾಸಿಗಳಿಗಾಗಿ ಕೇವಲ 4,700 ಫ್ಲ್ಯಾಟ್‌ಗಳನ್ನು ಮಾತ್ರ ನಿರ್ಮಿಸಿದ್ದಾರೆ. ಕೊಳೆಗೇರಿ ನಿವಾಸಿಗಳ ವಸತಿ ಅಗತ್ಯಗಳನ್ನು ಪರಿಹರಿಸದೆ ಬಿಜೆಪಿಯು ಅವರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ
ಕೊಳಗೇರಿಗಳಲ್ಲಿ ವಾಸಿಸುವ ಜನರ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಬಿಜೆಪಿ ಎಲ್ಲ ಸ್ಲಂಗಳನ್ನು ನೆಲಸಮ ಮಾಡುತ್ತದೆ ಮತ್ತು ಆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ದೂರಿದರು.
ಕೇಜ್ರಿವಾಲ್ ಅವರೊಂದಿಗೆ ಪಕ್ಷದ ಹಿರಿಯ ನಾಯಕ ಸತ್ಯೇಂದ್ರ ಜೈನ್, ಶಕುರ್ ಬಸ್ತಿ ಕ್ಷೇತ್ರದ ಅಭ್ಯರ್ಥಿ ಇದ್ದರು. ಜೈನ್ ಅವರು 2013, 2015 ಮತ್ತು 2020 ರಲ್ಲಿ ಗೆದ್ದ ನಂತರ ನಾಲ್ಕನೇ ಬಾರಿಗೆ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ.
ಫೆಬ್ರುವರಿ 5 ರಂದು ದೆಹಲಿ ಚುನಾವಣೆ ನಡೆಯಲಿದ್ದು, ಫೆಬ್ರುವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ. 2020ರ ಚುನಾವಣೆಯಲ್ಲಿ ದೆಹಲಿಯ 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದ AAP, ಸತತ ಮೂರನೇ ಅವಧಿಗೆ ದೆಹಲಿ ಗದ್ದುಗೆ ಮೇಲೆ ಕಣ್ಣಿಟ್ಟಿದೆ.
Advertisement