
ಮುಂಬೈ: ದರೋಡೆ ನಡೆಸುವ ಯತ್ನದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ, ಅವರ ಮೇಲೆ ಮನಬಂದಂತೆ ಚಾಕು ಇರಿದ ಪ್ರಕರಣದಲ್ಲಿ, ನಟನ ದೇಹದಿಂದ ತೆಗೆದ ಚಾಕುವಿನ ಚೂರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವರದಿ ಪ್ರಕಾರ, ಸೈಫ್ ಅಲಿ ಖಾನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ದೇಹವನ್ನು ಹೊಕ್ಕಿದ್ದ ಚಾಕುವಿನ ತುಂಡನ್ನು ನೆನ್ನೆ ಹೊರತೆಗೆಯಲಾಗಿತ್ತು. ಇದೀಗ ಹೆಕ್ಸಾ ಬ್ಲೇಡ್‌ನ ಸಣ್ಣ ತುಂಡನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜನವರಿ 16 ರ ನಸುಕಿನ ವೇಳೆಯಲ್ಲಿ, ಬಾಂದ್ರಾದಲ್ಲಿರುವ ಸೈಫ್ ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಯೊಬ್ಬ ಹಲವು ಬಾರಿ ಸೈಫ್ ಅವರಿಗೆ ಚಾಕುವಿನಿಂದ ಇರಿದಿದ್ದ. ಸೈಫ್ ಅವರ ಮೇಲೆ ಆರು ಬಾರಿ ಚಾಕು ಇರಿದಿದ್ದ ದುಷ್ಕರ್ಮಿ ನಂತರ ಪರಾರಿಯಾಗಿದ್ದ. ಗಂಭೀರವಾಗಿ ಗೊಯಗೊಂಡಿದ್ದ ನಟ ಸೈಫ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಜಾನೆ 2:15 ಕ್ಕೆ ಈ ಘಟನೆ ನಡೆದಿದ್ದು, ದಾಳಿ ವೇಳೆಯಲ್ಲಿ ಸೈಫ್ ಅವರಿಗಷ್ಟೇ ಅಲ್ಲದೆ, ಮನೆಯಲ್ಲಿದ್ದ ಸ್ಟಾಫ್ ನರ್ಸ್ ಮತ್ತು ಮನೆಗೆಲಸದವನಿಗೂ ಗಾಯವಾಗಿದೆ.
ಘಟನೆ ಸಮಯದಲ್ಲಿ, ಸೈಫ್ ಪತ್ನಿ, ಬಾಲಿವುಡ್ ನಟಿ ಕರೀನಾ ತಮ್ಮ ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರೊಂದಿಗೆ ಮನೆಯಲ್ಲೇ ಇದ್ದರು. ದುಷ್ಕರ್ಮಿ ಮೊದಲಿಗೆ ಸೈಫ್ ಮಗ ಜೆಹ್ ಕೋಣೆಯನ್ನು ಪ್ರವೇಶಿಸಿದ್ದಾನೆ. ಈ ವೇಳೆ ಉಂಟಾದ ಗದ್ದಲದಿಂದ ಸೈಫ್ ಎಚ್ಚರಗೊಂಡಿದ್ದಾರೆ.
ಕೂಡಲೇ ಅವರು ಜೆಹ್ ಕೋಣೆಯೊಳಗೆ ಪ್ರವೇಶಿಸಿದ್ದಾರೆ ಮತ್ತು ದುಷ್ಕರ್ಮಿಯಿಂದ ತಮ್ಮ ಮನೆಗೆಲಸದವನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಈ ಸಂಬಂಧ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
Advertisement