
ದುರ್ಗ್: ಜನವರಿ 16 ರಂದು ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಢದ ದುರ್ಗ್ ರೈಲು ನಿಲ್ದಾಣದಲ್ಲಿ ಬಂಧಿತನಾಗಿದ್ದ ವ್ಯಕ್ತಿಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ 30 ವರ್ಷದ ಪ್ರಮುಖ ಆರೋಪಿಯನ್ನು ಥಾಣೆಯಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಮುಂಜಾನೆ ಮಾಹಿತಿ ನೀಡಿದ್ದಾರೆ.
'ಶನಿವಾರ ಮಧ್ಯಾಹ್ನ ಮುಂಬೈ ಎಲ್‌ಟಿಟಿ-ಕೋಲ್ಕತ್ತಾ ಶಾಲಿಮಾರ್ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ದುರ್ಗ್ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆ ವ್ಯಕ್ತಿ ಕೇವಲ ಶಂಕಿತನಾಗಿದ್ದು, ವಿಚಾರಣೆಯ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ. ರಾತ್ರಿಯಿಡೀ ದುರ್ಗ್ ಸ್ಟೇಷನ್‌ನ ಆರ್‌ಪಿಎಫ್ ಪೋಸ್ಟ್‌ನಲ್ಲಿ ಆತನನ್ನು ಇರಿಸಲಾಗಿತ್ತು ಮತ್ತು ಇಂದು ಬೆಳಿಗ್ಗೆ ಬಿಡುಗಡೆ ಮಾಡಲಾಯಿತು' ಎಂದು ಪೊಲೀಸ್ ಅಧಿಕಾರಿ ಹೇಳಿದರು.
'ನಾವು ವಿಚಾರಣೆಗಾಗಿ ಯಾರನ್ನು ಬೇಕಾದರೂ ಬಂಧಿಸಬಹುದು. ಆತ ಕೇವಲ ಶಂಕಿತ ಎಂದಷ್ಟೇ ನಾವು ಹೇಳುತ್ತಿದ್ದೆವು. ನಮ್ಮ ಕಡೆಯಿಂದ ಯಾವುದೇ ತಪ್ಪು ಆಗಿಲ್ಲ. ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ ಎಂದು ನಾವು ಮಾಧ್ಯಮಗಳಿಗೆ ತಿಳಿಸಿದ್ದೆವು. ಆದರೆ, ಕೆಲವರು ಆತನನ್ನು ಆರೋಪಿ ಎಂದು ಘೋಷಿಸಿದರು' ಎಂದು ಮುಂಬೈ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರದೀಪ್ ಫುಡೆ ಡಗ್ ರೈಲು ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮುಂಬೈ ಪೊಲೀಸರು ಶಂಕಿತನ ಫೋಟೊವನ್ನು ತಮಗೆ ಕಳುಹಿಸಿದ ನಂತರವೇ ನಾವು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದೆವು. ಬಂಧಿತ ವ್ಯಕ್ತಿಯನ್ನು ಪ್ರಶ್ನಿಸಲು ಫಂಡೆ ನೇತೃತ್ವದ ಮುಂಬೈ ಪೊಲೀಸ್ ತಂಡ ನಿನ್ನೆ ರಾತ್ರಿ ಇಲ್ಲಿಗೆ ಆಗಮಿಸಿತ್ತು ಎಂದು ಇಲ್ಲಿನ ಆರ್‌ಪಿಎಫ್ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ ಬಾಂಗ್ಲಾದೇಶದ ಪ್ರಜೆಯಾಗಿರುವ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂಬ ಆರೋಪಿಯನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆತ ಜನವರಿ 16ರ ಮುಂಜಾನೆ ಬಾಂದ್ರಾದ ಸದ್ಗುರು ಶರಣ್ ಕಟ್ಟಡದಲ್ಲಿರುವ ಬಾಲಿವುಡ್ ತಾರೆಯ ಮನೆಗೆ ಕಳ್ಳತನದ ಉದ್ದೇಶದಿಂದ ಪ್ರವೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಸೈಫ್ ಅಲಿ ಖಾನ್ ಅವರಿಗೆ ಅನೇಕ ಬಾರಿ ಚಾಕುವಿನಿಂದ ಇರಿಯಲಾಗಿತ್ತು. ನಂತರ ಅವರು ಹತ್ತಿರದ ಲೀಲಾವತಿ ಆಸ್ಪತ್ರೆಯಲ್ಲಿ ಐದು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
Advertisement