
ಮುಂಬೈ: 13 ಅಂತಸ್ತಿನ ಕಟ್ಟಡದಲ್ಲಿ ಆಟವಾಡುತ್ತಾ ಮಗುವೊಂದು ಕೆಳಗೆ ಬಿದ್ದಿದ್ದು, ಕಟ್ಟಡದ ಆವರಣದಲ್ಲಿದ್ದ ವ್ಯಕ್ತಿಯೋರ್ವ ಮಗುವನ್ನು ಪವಾಡ ಸದೃಶ ರೀತಿಯಲ್ಲಿ ರಕ್ಷಿಸಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ಥಾಣೆಯ ಡೊಂಬಿವಲಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎರಡು ವರ್ಷದ ಮಗುವೊಂದು 13 ಅಂತಸ್ತಿನ ಕಟ್ಟಡದ 3ನೇ ಮಹಡಿಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಮಗು ನೋಡ ನೋಡುತ್ತಲೇ ಕೆಳಗೆ ಬಿದ್ದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಮಗು ಅಚಾನಕ್ಕಾಗಿ ಆಗಿ ಕೆಳಗೆ ಬಿದ್ದಿದೆ. ಇದೇ ವೇಳೆ ಅದೇ ಕಟ್ಟಡದಿಂದ ಹೊರಬರುತ್ತಿದ್ದ ವ್ಯಕ್ತಿಯೊಬ್ಬರು ಮಗು ಬೀಳುವುದನ್ನು ಕಂಡು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಮೇಲಿಂದ ಮಗು ವ್ಯಕ್ತಿಯ ಕೈಗೆ ಬಿದ್ದು ಬಳಿಕ ಜಾರಿ ನೆಲಕ್ಕೆ ಅಪ್ಪಳಿಸಿದೆ. ಅದಾಗ್ಯೂ ಮಗುಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಸ್ತುತ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎನ್ನಲಾಗಿದೆ.
ದೇವರಂತೆ ಬಂದ ಭವೇಶ ಮಹಾತ್ರೆ
ಮಗು ಕಟ್ಟಡದ 13ನೇ ಮಹಡಿಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಅಲ್ಲಿಂದ ಜಾರಿ ಬಿದ್ದಿತು. ಈ ವೇಳೆ ಸ್ಥಳೀಯ ನಿವಾಸಿ ಭವೇಶ ಮಹಾತ್ರೆ ಎಂಬುವವರು ಇದನ್ನು ಗಮನಿಸಿ ಮಗುವನ್ನು ಹಿಡಿಯಲೆತ್ನಿಸಿದ್ದಾರೆ. ಈ ವೇಳೆ ಮೇಲಿಂದ ಬಿದ್ದ ಮಗು ನೇರವಾಗಿ ಅವರ ಕೈಗಳಿಂದ ಜಾರಿದೆ. ಈ ಹಂತದಲ್ಲಿ ಮಗು ಬೀಳುತ್ತಿದ್ದ ವೇಗ ಕಡಿತಗೊಂಡು ಮಗು ನೆಲಕ್ಕೆ ಅಪ್ಪಳಿಸಿದೆ. ಹೀಗಾಗಿ ಮಗುವಿಗೆ ಯಾವುದೇ ಗಂಭೀರ ಅಪಾಯವಾಗಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ವ್ಯಕ್ತಿಯ ಸಾಹಸ, ಸಮಯ ಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ
ಇನ್ನು ಮಗು ಬೀಳುವುದನ್ನು ಕ್ಷಣಾರ್ಧದಲ್ಲಿ ಅರಿತು ಹಿಡಿಯಲು ಧಾವಿಸಿದ ಭವೇಶ್ ಮಹಾತ್ರೆ ಅವರ ಸಾಹಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ಮಹಾತ್ರೆ ಅವರ ತಕ್ಷಣದ ಪ್ರತಿಕ್ರಿಯೆಯಿಂದ ಮಗು ಬಚಾವಾಗಿದೆ. ಮಗುವಿಗೆ ಸಣ್ಣಪುಟ್ಟ ಗಾಯವಾಗಿವೆ. ಆದರೆ, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಹಾತ್ರೆ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗಿದ್ದು, ನೆಟ್ಟಿಗರು ಕೂಡ ವ್ಯಕ್ತಿಗೆ ಶಹಬ್ಬಾಸ್ ಎಂದಿದ್ದಾರೆ.
Advertisement