
ಲಖನೌ: ಜೈನ ನಿರ್ವಾಣ ಲಡ್ಡು ಉತ್ಸವದಲ್ಲಿ ವೇದಿಕೆ ಕುಸಿದು ಬಿದ್ದು 7 ಮಂದಿ ಸಾವನ್ನಪ್ಪಿ, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಮಂಗಳವಾರ ನಡೆದಿದೆ.
ಜೈನ ಧರ್ಮದ ಮೊದಲ ತೀರ್ಥಂಕರ ಭಗವಾನ್ ಆದಿನಾಥರ ಸ್ಮರಣಾರ್ಥ ‘ನಿರ್ವಾಣ ಲಡ್ಡು ಪರ್ವ್’ ಕಾರ್ಯಕ್ರಮದಲ್ಲಿ ಜೈನ ಸನ್ಯಾಸಿಗಳ ಸಮ್ಮುಖದಲ್ಲಿ ಭಗವಾನ್ ಆದಿನಾಥನಿಗೆ ಲಡ್ಡುಗಳನ್ನು ಅರ್ಪಿಸುವ ಸಮಾರಂಭದಲ್ಲಿ ಈ ಘಟನೆ ನಡೆದಿದೆ.
ಕಳೆದ 30 ವರ್ಷಗಳಿಂದ ಜೈನ ಸಮುದಾಯವು ಲಡ್ಡೂ ಮಹೋತ್ಸವವನ್ನು ಆಚರಿಸುತ್ತಾ ಬರುತ್ತಿದೆ. ದೇವರಿಗೆ ಲಡ್ಡು ಪ್ರಸಾದ ನೈವೇದ್ಯ ಮಾಡುವ ಹಿನ್ನೆಲೆಯಲ್ಲಿ ಬಿದಿರಿನಿಂದ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡಲಾಗಿದೆ. ಮಾನ್‌ಸ್ತಂಭ ಕಾಂಪ್ಲೆಕ್ಸ್‌ನಲ್ಲಿ 65 ಅಡಿಯ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡಲಾಗಿದ್ದು, ನೂರಾರು ಭಕ್ತರು ಮರದ ಮೆಟ್ಟಿಲುಗಳ ಮೇಲೆ ಇರುವಾಗಲೇ ವೇದಿಕೆ ಕುಸಿದು ಬಿದ್ದಿದೆ. ಜನ ದಟ್ಟಣೆ ಹೆಚ್ಚಿದ್ದರಿಂದ ವೇದಿಕೆ ಕುಸಿದು ಬಿದ್ದಿದೆ ಎನ್ನಲಾಗಿದೆ.
ಏತನ್ಮಧ್ಯೆ, ಘಟನೆಯ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾಲ್ತುಳಿತದಂತಹ ಪರಿಸ್ಥಿತಿ ಎದುರಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕ ತಂದಿದ್ದಾರೆಂದು ತಿಳಿದುಬಂದಿದೆ.
ಸ್ಥಳಕ್ಕೆ ದೌಡಾಯಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳು, ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮ ಮರದ ತುಂಡುಗಳನ್ನು ಬಳಸಿ ವೇದಿಕೆ ಸಜ್ಜುಗೊಳಿಸಿ, ಅದರ ಮೇಲೆ 4-5 ಅಡಿ ಎತ್ತರದ ಆದಿನಾಥನ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಈ ವೇದಿಕೆ ಕುಸಿದು ಬಿದ್ದಿದೆ. 40 ಗಾಯಾಳುಗಳ ಪೈಕಿ 20 ಮಂದಿಯನ್ನು ಚಿಕಿತ್ಸೆ ಬಳಿಕ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಇನ್ನೂ 20 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಗಾಯಾಳುಗಳಿಗೆ ತ್ವರಿತ ನೆರವು ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
Advertisement