
ಅಮರಾವತಿ: ಮಹತ್ವದ ಬೆಳವಣಿಗೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಸಿದ್ಧಾರ್ಥ್ ಕೌಶಲ್ (Siddharth Kaushal) ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಆಂಧ್ರಪ್ರದೇಶದ ಐಪಿಎಸ್ ಅಧಿಕಾರಿ ಸಿದ್ಧಾರ್ಥ್ ಕೌಶಲ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಡಿಜಿಪಿಗೆ ಕಳುಹಿಸಿದ್ದು, ಈ ನಿರ್ಧಾರವನ್ನು ತಾವೇ ತೆಗೆದುಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಐಪಿಎಸ್ ಅಧಿಕಾರಿ ಸಿದ್ಧಾರ್ಥ್ ಕೌಶಲ್ ಈ ಹಿಂದೆ ಕಡಪ, ಕೃಷ್ಣ ಮತ್ತು ಪ್ರಕಾಶಂ ಜಿಲ್ಲೆಗಳ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಡಿಜಿಪಿ ಕಚೇರಿಯಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೇ ವೇಳೆ ರಾಜಕೀಯ ಒತ್ತಡದಿಂದಾಗಿ ರಾಜೀನಾಮೆ ನೀಡುತ್ತಿರುವ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ.
'ವೈಯಕ್ತಿಕ ಕಾರಣಗಳಿಂದಾಗಿ ಐಪಿಎಸ್ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಸ್ವಯಂಪ್ರೇರಣೆಯಿಂದ ಐಪಿಎಸ್ ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಅಂತೆಯೇ ಇಷ್ಟು ವರ್ಷಗಳ ಕಾಲ ಆಂಧ್ರಪ್ರದೇಶ ರಾಜ್ಯದಲ್ಲಿ ಕೆಲಸ ಮಾಡಿದ್ದಕ್ಕೆ ನಾನು ಅದೃಷ್ಟಶಾಲಿ. ಆಂಧ್ರಪ್ರದೇಶ ಸರ್ಕಾರಕ್ಕೆ ಈ ಮೂಲಕ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಸರ್ಕಾರ, ಅಧಿಕಾರಿಗಳು, ಸಹೋದ್ಯೋಗಿಗಳು ಮತ್ತು ಇಷ್ಟು ದಿನ ತಮಗೆ ಸಹಕರಿಸಿದ ಎಲ್ಲ ಜನರಿಗೆ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ' ಎಂದು ಸಿದ್ಧಾರ್ಥ್ ಕೌಶಲ್ ಹೇಳಿದರು.
ಅಂತೆಯೇ ಮುಂಬರುವ ದಿನಗಳಲ್ಲಿ ಹೊಸ ಗುರಿಗಳೊಂದಿಗೆ ಮತ್ತು ಸಮಾಜಕ್ಕೆ ವಿಭಿನ್ನ ರೀತಿಯಲ್ಲಿ ಸೇವೆ ಸಲ್ಲಿಸುವ ಸಂಕಲ್ಪದೊಂದಿಗೆ ಮುನ್ನಡೆಯುವುದಾಗಿ ಸಿದ್ಧಾರ್ಥ್ ಕೌಶಲ್ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ಸಿದ್ಧಾರ್ಥ್ ಕೌಶಲ್ ಈ ಹಿಂದೆಯೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು.
Advertisement