
ನವದೆಹಲಿ: ನೈಋತ್ಯ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನಿಂದ ಲೈಂಗಿಕ ದೌರ್ಜನ್ಯ ನಡೆದಿದ್ದು, ನಂತರ ಬಾಲಕಿ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆರೋಪಿಯನ್ನು ಎಂಡಿ ರೆಹಾನ್ ಎಂದು ಗುರುತಿಸಲಾಗಿದ್ದು, ಆತ ಮದುವೆಯ ನೆಪವೊಡ್ಡಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಕ್ಷೇಪಾರ್ಹ ಚಿತ್ರಗಳನ್ನು ತೋರಿಸಿ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 18 ರಂದು ಬೆನ್ನುಮೂಳೆಯ ಗಾಯಗಳ ಆಸ್ಪತ್ರೆಯಿಂದ ಎಂಎಲ್‌ಸಿ (ವೈದ್ಯಕೀಯ-ಕಾನೂನು ಪ್ರಕರಣ) ವರದಿ ಬಂದ ನಂತರ ಬಾಲಕಿಯೊಬ್ಬಳು ಆ್ಯಸಿಡ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಮಾಹಿತಿ ತಿಳಿದುಬಂದಿದೆ ಎಂದು ಅವರು ಹೇಳಿದರು.
ಪೊಲೀಸರ ತಂಡ ಆಸ್ಪತ್ರೆಗೆ ತಲುಪಿತು. ಆದರೆ, ಆ ಸಮಯದಲ್ಲಿ ಬಾಲಕಿ ಹೇಳಿಕೆ ದಾಖಲಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸ್ಥಳೀಯ ಅಪರಾಧ ತಂಡವನ್ನು ನಿಯೋಜಿಸಲಾಗಿದ್ದು, ಘಟನೆ ನಡೆದ ಸ್ಥಳವನ್ನು ಪರಿಶೀಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಅಮಿತ್ ಗೋಯೆಲ್ ತಿಳಿಸಿದ್ದಾರೆ.
'ಆಕೆಯ ನಿವಾಸದಿಂದ ಆ್ಯಸಿಡ್ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆ ಹುಡುಗಿ ರಿಹಾನ್ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಮನೆಯಲ್ಲಿ ಒಂಟಿಯಾಗಿದ್ದ ಹುಡುಗಿ ಆ್ಯಸಿಡ್ ಸೇವಿಸಿದ್ದಾಳೆ. ಸಂಜೆ 4.45ರ ಸುಮಾರಿಗೆ ಆಕೆಗೆ ನೋವು ಕಾಣಿಸಿಕೊಂಡಿರುವುದನ್ನು ನೆರೆಹೊರೆಯವರು ಗಮನಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಜೂನ್ 20 ರಂದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು' ಎಂದು ಡಿಸಿಪಿ ಹೇಳಿದರು.
'ನಂತರ, ಸಂತ್ರಸ್ತೆಯ ತಾಯಿ ವಸಂತ್ ಕುಂಜ್ (ದಕ್ಷಿಣ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಿಹಾನ್ ಮದುವೆಯ ನೆಪದಲ್ಲಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಆಕ್ಷೇಪಾರ್ಹ ಫೋಟೋಗಳೊಂದಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ' ಎಂದು ಗೋಯೆಲ್ ಹೇಳಿದರು.
ದೂರುದಾರರು ತಮ್ಮ ಮಗಳ ಮೊಬೈಲ್ ಫೋನ್ ಅನ್ನು ಸಹ ಹಸ್ತಾಂತರಿಸಿದ್ದಾರೆ. ಅದರಲ್ಲಿ ಆರೋಪಗಳನ್ನು ಬೆಂಬಲಿಸುವ ಧ್ವನಿ ರೆಕಾರ್ಡಿಂಗ್‌ಗಳಿವೆ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ವಸಂತ್ ವಿಹಾರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡಲಾಯಿತು ಮತ್ತು ಆಸ್ಪತ್ರೆಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಲು ತಹಶೀಲ್ದಾರ್ ಅವರನ್ನು ನಿಯೋಜಿಸಲಾಯಿತು.
ಜೂನ್ 25 ರಂದು ವಸಂತ್ ಕುಂಜ್ (ದಕ್ಷಿಣ) ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 69 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಂಗಪುರಿ ಪಹಾರಿಯ ಶಂಕರ್ ಕ್ಯಾಂಪ್ ನಿವಾಸಿ ರೆಹಾನ್ ಅವರನ್ನು ಬಂಧಿಸಲಾಗಿದೆ. ಈತ 12ನೇ ತರಗತಿಯವರೆಗೆ ಓದಿದ್ದು, ಈ ಹಿಂದೆ ವಿಮಾನ ನಿಲ್ದಾಣದಲ್ಲಿ ಲೋಡರ್ ಆಗಿ ಕೆಲಸ ಮಾಡುತ್ತಿದ್ದ. ಸದ್ಯ ನಿರುದ್ಯೋಗಿಯಾಗಿದ್ದು, ಆತನ ತಂದೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
Advertisement