
ಪುಣೆ: ಇಲ್ಲಿನ ಐಷಾರಾಮಿ ವಸತಿ ಸೊಸೈಟಿಯಲ್ಲಿ ವಾಸಿಸುತ್ತಿದ್ದ 22 ವರ್ಷದ ಮಹಿಳೆ ಮೇಲೆ ಕೊರಿಯರ್ ವಿತರಣಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಕಾರ, ಮಹಿಳೆ ತನ್ನ ಫೋನ್‌ನಲ್ಲಿನ OTP ಪರಿಶೀಲಿಸಲು ಒಳಗೆ ಹೋದ ನಂತರ ಆರೋಪಿ ಆಕೆಯ ಮನೆಗೆ ಪ್ರವೇಶಿಸಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿ ಸ್ಥಳದಿಂದ ಹೊರಟುಹೋಗಿದ್ದಾನೆ.
ಕೆಲವು ವರದಿಗಳ ಪ್ರಕಾರ, ಆರೋಪಿಯು ಮಹಿಳೆಯ ಮುಖಕ್ಕೆ ಏನನ್ನೋ ಸಿಂಪಡಿಸಿದ್ದು, ಕೃತ್ಯದ ಬಳಿಕ ಆತ ಸ್ಥಳದಿಂದ ಕಾಲ್ಕಿತ್ತ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಆರೋಪಿಯು ಫ್ಲಾಟ್‌ನಿಂದ ಹೊರಡುವ ಮುನ್ನ ಸಂತ್ರಸ್ತೆಯ ಫೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು 'ನಾನು ಮತ್ತೆ ಬರುತ್ತೇನೆ' ಎಂದು ಬರೆದಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ರಾಜ್‌ಕುಮಾರ್ ಶಿಂಧೆ ತಿಳಿಸಿದ್ದಾರೆ.
'ನಿನ್ನೆ ಸಂಜೆ 7.30ರ ಸುಮಾರಿಗೆ, ಬ್ಯಾಂಕ್ ಲಕೋಟೆಯೊಂದಿಗೆ ಡೆಲಿವರಿ ಬಾಯ್ 22 ವರ್ಷದ ಮಹಿಳೆಯ ಫ್ಲಾಟ್‌ಗೆ ತಲುಪಿದ್ದಾನೆ. ಕೊರಿಯರ್ ನೀಡಲು ಪಿನ್ ಕೇಳಿದ್ದಾನೆ. ಆಗ ಫೋನ್ ತರಲೆಂದು ಆಕೆ ಒಳಗಡೆ ಹೋದಾಗ, ಆತನು ಒಳ ಪ್ರವೇಶಿಸಿ ಬಾಗಿಲು ಮುಚ್ಚಿದ್ದಾನೆ ಮತ್ತು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ' ಎಂದರು.
'ಅಪರಾಧ ವಿಭಾಗದ ಐದು ಮತ್ತು ಐದು ವಲಯ ತಂಡಗಳು ಸೇರಿದಂತೆ ಹತ್ತು ತಂಡಗಳು ಈ ಪ್ರಕರಣದ ತನಿಖೆಯಲ್ಲಿ ತೊಡಗಿವೆ. ಮಹಿಳೆ ಸಂಜೆ 7.30 ರಿಂದ ಪ್ರಜ್ಞಾಹೀನಳಾಗಿದ್ದಳು. ಆಕೆಯ ಮೇಲೆ ಏನಾದರೂ ಸ್ಪ್ರೇ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ವಿಧಿವಿಜ್ಞಾನ ತಜ್ಞರನ್ನು ಕರೆಯಲಾಯಿತು. ಮಹಿಳೆಯ ಫೋನ್‌ನಲ್ಲಿ ಸೆಲ್ಫಿ ಕಂಡುಬಂದಿದೆ. ನಾವು ಅದನ್ನು ವಿಶ್ಲೇಷಿಸುತ್ತಿದ್ದೇವೆ' ಎಂದು ಅವರು ಹೇಳಿದರು.
Advertisement