
ಹರಿಯಾಣ: ವಿದೇಶದಲ್ಲಿ ಉದ್ಯೋಗ ಮಾಡಲು ಯಾರಿಗೆ ಇಷ್ಟಯಿಲ್ಲ ಹೇಳಿ. ಅವಕಾಶ ಸಿಕ್ಕರೆ ಒಂದು ಕೈ ನೋಡಿಯೇ ಬಿಡೋಣ ಎನ್ನುವವರೇ ಹೆಚ್ಚಿದ್ದಾರೆ. ಆದರೆ, ಹೀಗೆ ಹುಮ್ಮಸ್ಸಿನಿಂದ ಅಮೆರಿಕಾಗೆ ಉದ್ಯೋಗಕ್ಕೆ ಹೋದ ಹರಿಯಾಣ ಮೂಲಕ ವ್ಯಕ್ತಿಯೊಬ್ಬ ಏಜೆಂಟ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿ ಬಂಧನಕ್ಕೆ ಒಳಗಾಗಿ, 15 ತಿಂಗಳ ಅಗ್ನಿ ಪರೀಕ್ಷೆ ಬಳಿಕ ಇದೀಗ ತಾಯ್ನಾಡಿಗೆ ವಾಪಸ್ಸಾಗಿದ್ದಾನೆ.
ಹೌದು... ಅಮೆರಿಕಾದಲ್ಲಿ ಬಂಧನದಲ್ಲಿ ಬಂಧನಕ್ಕೊಳಗಾಗಿದ್ದ ಹರಿಯಾಣ ಮೂಲದ ವಿಶಾಲ್ (27) ಎಂಬುವವರು ಕೊನೆಗೂ ಮರಳಿ ತಾಯಿನಾಡಿಗೆ ಬಂದಿದ್ದಾರೆ.
ಮೂಲತಃ ಯಮುನಾ ನಗರ ಜಿಲ್ಲೆಯ ನಂದಗಢ್ ಗ್ರಾಮ ಮೂಲದ ವಿಶಾಲ್ ಅವರು, ಏಜೆಂಟ್ ಮಾಡಿದ ಮೋಸದಿಂದ ಅಮೆರಿಕಾದಲ್ಲಿ ಸಾಕಷ್ಟು ನೋವುಗಳನ್ನು ಪಡಬೇಕಾಯಿತು. ತಾನು ಕಂಡ ಕನಸು ತನ್ನನ್ನು ಜೈಲಿಗಟ್ಟುತ್ತದೆ ಎಂಬುದನ್ನು ವಿಶಾಲ್ ಊಹಿಸಿಯೂ ಇರಲಿಲ್ಲ.
ಕಳೆದ ತಿಂಗಳು ನ್ಯೂವಾರ್ಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶಾಲ್ ನನ್ನು ಅಮೆರಿಕದ ವಲಸೆ ಅಧಿಕಾರಿಗಳು ಕೈಗೆ ಕೋಳ ಹಾಕಿ ಬಂಧಿಸಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಧಿಕಾರಿಗಳ ವರ್ತನೆಗೆ ಆಕ್ರೋಶ ಹಾಗೂ ಗೊಂದಲಗಳನ್ನು ಹುಟ್ಟುಹಾಕಿದ್ದವು.
ಆರಂಭದಲ್ಲಿ ವಿಶಾಲ್ ನನ್ನು ವಿದ್ಯಾರ್ಥಿ ಎಂದು ಭಾವಿಸಲಾಗಿತ್ತು. ನಂತರ ಆತ ಅಕ್ರಮ ವಲಸಿಗ ಎಂಬುದು ಖಚಿತವಾಗಿತ್ತು. ವಾರದ ಹಿಂದಷ್ಟೇ ವಿಶಾಲ್ ಅವರು ತಮ್ಮ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ. ಅವರ ವಾಪಸ್ಸಾತಿ ಬಳಿಕ ಸತ್ಯಗಳು ಬಹಿರಂಗವಾಗಿದೆ. ವ್ಯಕ್ತಿ ಏಜೆಂಟ್ ಮಾಡಿದ ಮೋಸಕ್ಕೆ ಬಲಿಯಾಗಿರುವುದು ತಿಳಿದುಬಂದಿದೆ.
ವಿಶಾಲ್ ರೈತನಾಗಿದ್ದು, 10ನೇ ತರಗತಿ ಉತ್ತೀರ್ಣರಾದ ಬಳಿಕ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಈ ನಡುವೆ ಕರ್ನಾಲ್ ಮೂಲದ ಏಜೆಂಟ್ ಒಬ್ಬ ಅಮೇರಿಕನ್ ಕೆಲಸದ ವೀಸಾ ಕೊಡಿಸುವುದಾಗಿ ಭರವಸೆ ನೀಡಿ, ಲಕ್ಷ ರೂಪಾಯಿಗಳನ್ನು ಪಡೆದು, ವಂಚಿಸಿದ್ದಾನೆಂದು ತಿಳಿದುಬಂದಿದೆ.
ಕೃಷಿ ಭೂಮಿ ಮಾರಾಟ ಮಾಡಿ ಏಜೆಂಟ್'ಗೆ ಹಣ ನೀಡಲಾಗಿತ್ತು. ಮೊದಲಿಗೆ ಯುರೋಪ್ ತೆರಳಿ, ನಂತರ ಮಧ್ಯ ಅಮೆರಿಕದ ಮೂಲಕ ಅಮೆರಿಕಾಗೆ ಕರೆದೊಯ್ಯುತ್ತೇವೆಂದು ಹೇಳಿದ್ದರು. ಇಟಲಿಯಲ್ಲಿರುವ ನಮ್ಮ ಸಂಬಂಧಿಕರೊಬ್ಬರು ನನಗೆ ಒಂಬತ್ತು ತಿಂಗಳ ಫಾರ್ಮ್ ವೀಸಾ ಪಡೆಯಲು ಸಹಾಯ ಮಾಡಿದರು. ನಾನು ವೆರೋನಾ ತಲುಪಿದೆ, ಎಂಟು ದಿನಗಳ ಕಾಲ ಅಲ್ಲಿಯೇ ಇದ್ದೆ, ನಂತರ ರೋಮ್‌ಗೆ ತೆರಳಿದ್ದೆ. ಅಲ್ಲಿಂದ ಸಂಕಷ್ಟಗಳು ಶುರುವಾದವು.
ಬ್ರೆಜಿಲ್‌ನಿಂದ ಕೊಲಂಬಿಯಾಕ್ಕೆ, ನಂತರ ಪನಾಮದ ದೊಡ್ಡ ಕಾಡಿನ ಮಾರ್ಗಗಳ ಮೂಲಕ ನನ್ನನ್ನು ಕರೆದೊಯ್ದರು. ಈ ಪ್ರಯಾಣ ಅತ್ಯಂ ಕಠಿಣವಾಗಿತ್ತು. ಪನಾಮ ಕಾಡಿನ ಮೂಲಕ ನಾಲ್ಕು ದಿನಗಳ ಕಾಲ ನಡೆದೆ, ಮೂರು ಪರ್ವತಗಳನ್ನು ಹತ್ತಿದೆ, ಆಳದ ನದಿಗಳು, ರಾತ್ರಿಯಲ್ಲಿ ಕಾಡು ಪ್ರಾಣಿಗಳ ಘರ್ಜನೆಗಳು ಕೇಳಿಸಿದ್ದವು. ಅಲ್ಲಿಂದ ಹೇಗೆ ಜೀವಂತವಾಗಿ ಹೊರಬಂದೆನೆಂದು ತಿಳಿದಿಲ್ಲ. ದಾರಿಯಲ್ಲಿ ಹಲವರ ಮೃತ ದೇಹಗಳನ್ನೂ ನೋಡಿದೆ. ಮಕ್ಕಳನ್ನು ಹೊತ್ತುಕೊಂಡ ಹಲವು ಮಹಿಳೆಯರು ನಮ್ಮ ಪಕ್ಕದಲ್ಲಿ ನಡೆಯುತ್ತಿದ್ದರು.
ಕಿರಿಯ ಸಹೋದರ ನೀಡಿದ ಹಣದಿಂದ ಕೋಸ್ಟಾ ರಿಕಾ, ನಿಕರಾಗುವಾ, ಹೊಂಡುರಾಸ್ ಮತ್ತು ಗ್ವಾಟೆಮಾಲಾದಲ್ಲಿ ಬಸ್‌ನಲ್ಲಿ ಪ್ರಯಾಣಿಸಿದ ನಂತರ ಮೆಕ್ಸಿಕೊ ತಲುಪಿದ್ದೆ. ಮೆಕ್ಸಿಕೋದಲ್ಲಿ ಏಜೆಂಟ್ ನಿಜಬಣ್ಣ ಬಯಲಾಗಿತ್ತು. ನಮ್ಮನ್ನು ಗೊಂಪೊಂದು ಅಪಹರಣ ಮಾಡಿ, 2 ತಿಂಗಳ ಕಾಲ ಕೂಡಿ ಹಾಕಿತ್ತು.
“ಒಂದು ರಾತ್ರಿ ಪ್ರಾಣ ಪಣಕ್ಕಿಟ್ಟಾದರೂ ತಪ್ಪಿಸಿಕೊಳ್ಳಲು ಬಯಸಿದ್ದೆ. ಎರಡನೇ ಮಹಡಿಯ ಬಾಲ್ಕನಿಯಿಂದ ಹಾರಿದೆ. ನಾನು ಓಡುತ್ತಿದ್ದಂತೆ ಅವರಲ್ಲಿ ಒಬ್ಬರು ನನ್ನ ಮೇಲೆ ಗುಂಡು ಹಾರಿಸಿದರು, ಆದರೆ, ನಾನು ನಿಲ್ಲಲಿಲ್ಲ. ನನ್ನ ಜೀವ ಉಳಿಸಿಕೊಳ್ಳಲು ಓಡಿ, ತಪ್ಪಿಸಿಕೊಂಡೆ. ನಂತರ ಮತ್ತೊಬ್ಬ ಏಜೆಂಟ್ ಅನ್ನು ಹುಡುಕಿದೆ. ಅಮೆರಿಕಾಗೆ ತೆರಳಲು ಆತನಿಗೆ 5 ಲಕ್ಷ ರೂ. ನೀಡಲಾಯಿತು. 1,000 ಕಿಮೀ. ಪ್ರಯಾಣಿಸಿದ್ದೆ. ಅಮೆರಿಕಾದ ಗಡಿ ತಲುಪುತ್ತಿದ್ದಂತೆಯೇ ನಮ್ಮ ವಾಹನವನ್ನು ತಡೆಹಿಡಿಯಲಾಗಿತ್ತು. ಈ ವೇಳೆ ನನ್ನನ್ನು ಬಂಧಿಸಿ ಟೆಕ್ಸಾಸ್‌ನಲ್ಲಿ 10 ತಿಂಗಳ ಕಾಲ ಜೈಲಿನಲ್ಲಿರಿಸಿದರು.
ಜೈಲು ವಾಸದ ವೇಳೆ ನನ್ನ ತಂದೆ ತೀರಿಕೊಂಡ ಸುದ್ದಿ ತಿಳಿಯಿತು. ತಿಂಗಳುಗಳ ಜೈಲುವಾಸದ ನಂತರ, ನನ್ನನ್ನು ಗಡೀಪಾರು ಮಾಡಲು ನ್ಯೂವಾರ್ಕ್ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಇದೀಗ ವೈರಲ್ ಆಗಿರುವುದು ಅದೇ ವೀಡಿಯೋ.
ಅವರು ನನ್ನನ್ನು ಹುಚ್ಚ ಎಂದು ಕರೆಯುತ್ತಲೇ ಇದ್ದರು. ನಾನು ಕೋಪದಿಂದ 'ನಾನು ಹುಚ್ಚನಲ್ಲ ಎಂದು ಕೂಗಿದೆ. ಅದು ಹಿಂಸಾತ್ಮಕ ನಡವಳಿಕೆ ಎಂದು ವರದಿಯಾಯಿತು. ನನ್ನನ್ನು ಮತ್ತೆ ಜೈಲಿಗೆ ಕರೆದೊಯ್ಯಲಾಯಿತು. ಅಂತಿಮವಾಗಿ ಜೂನ್ 25 ರಂದು ಮಹಿಳೆಯರು ಸೇರಿದಂತೆ 222 ಮಂದಿಯನ್ನು ಲೂಸಿಯಾನದಿಂದ ಗಡೀಪಾರು ಮಾಡಲಾಯಿತು. ಅದರಲ್ಲಿ ನಾನು ಒಬ್ಬನಾಗಿದ್ದೆ. ದೆಹಲಿಯಲ್ಲಿ ಇಳಿದ ನಂತರ, ನಂದಗಢಕ್ಕೆ ಬಸ್ ಹತ್ತಿಸಿದರು. ಇದೀಗ ಮನೆಗೆ ವಾಪಸ್ಸಾಗಿದ್ದೇನೆ. ಕಾನೂನು ಉಲ್ಲಂಘಿಸುವ ಉದ್ದೇಶ ನನ್ನದಾಗಿರಲಿಲ್ಲ. ಅಮೆರಿಕಾದಲ್ಲಿ ಉತ್ತಮ ಹಣ ಸಂಪಾದನೆ ಮಾಡಿ, ಕುಟುಂಬವನ್ನು ಅಮೆಕಾಕ್ಕೆ ಕರೆತರಲು ಬಯಸಿದ್ದೆ. ಆದರೆ, ವಂಚನೆಗೊಳಗಾದೆ. ನನ್ನಂತೆ ಯಾರೂ ಮೋಸ ಹೋಗದಿಸಿ. ಕಾನೂನು ಮಾರ್ಗಗಳನ್ನೇ ಅನುಸರಿಸಿ, ಶಾರ್ಟ್ ಕಟ್ ಮಾರ್ಗ ಬೇಡ. ಅದು ನಿಮ್ಮ ಜೀವನವನ್ನೇ ನಾಶ ಮಾಡುತ್ತದೆ ಎಂದು ವಿಶಾಲ್ ಅವರು ಕಣ್ಣೀರಿಟ್ಟಿದ್ದಾರೆ.
ಇನ್ನು ವಿಶಾಲ್ ಅವರ ತಮ್ಮ ವೀರೇನ್ ಕೂಡ ಇದೀಗ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದು, ಈ ಬಾರಿ ಐಇಎಲ್ಟಿಎಸ್ ತರಬೇತಿ ಪ್ರಮಾಣಪತ್ರದೊಂದಿಗೆ ಕಾನೂನುಬದ್ಧವಾಗಿ ಅಮೆರಿಕಾಕ್ಕೆ ತೆರಳುತ್ತೇನೆಂದು ಹೇಳಿದ್ದಾರೆ.
Advertisement