
ಮುಂಬೈ: ಮರಾಠಿ ಕಲಿಯಲ್ಲ ಎಂದು ರಾಜ್ ಠಾಕ್ರೆ ಅವರಿಗೆ ಸವಾಲು ಹಾಕಿ ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಹಂಚಿಕೊಂಡಿದ್ದ ಉದ್ಯಮಿ ಸುಶೀಲ್ ಕೇಡಿಯಾ ಅವರ ಕಚೇರಿ ಮೇಲೆ ದಾಳಿ ನಡೆಸಿದ ಐವರು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕಾರ್ಯಕರ್ತರನ್ನು ಶನಿವಾರ ಬಂಧಿಸಲಾಗಿದೆ.
ದಾಳಿ ನಡೆದ ಕೆಲ ತಾಸುಗಳ ಬಳಿಕ, ಮಿತಿ ಮೀರಿದ ರೀತಿಯ ಸೋಶಿಯಲ್ ಮೀಡಿಯಾ ಫೋಸ್ಟ್ ನಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಠಾಕ್ರೆ ಅವರ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒತ್ತಡದಲ್ಲಿ ತಪ್ಪು ಮನಸ್ಥಿತಿಯಲ್ಲಿ ಅಂತಹ ಪೋಸ್ಟ್ ಹಾಕಿದ್ದು, ತನ್ನ ತಪ್ಪು ಗೊತ್ತಾದ ಬಳಿಕ ಅದನ್ನು ನಿಸ್ಸಂದಿಗ್ಧವಾಗಿ ಸರಿಪಡಿಸಿಕೊಳ್ಳಲು ಬಯಸಿದ್ದೇನೆ. ಮರಾಠಿ ಗೊತ್ತಿಲ್ಲದವರ ಮೇಲೆ ನಡೆದ ದಾಳಿಯಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದೇನೆ. ನನ್ನ ಮಿತಿ ಮೀರಿದ ರೀತಿಯ ಹೇಳಿಕೆಯನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.
ಮುಂಬಯಿಯಲ್ಲಿ 30 ವರ್ಷಗಳ ಕಾಲ ವಾಸಿಸುತ್ತಿದ್ದರೂ, ಸ್ಥಳೀಯ ಮರಾಠಿಯವರು ಮಾತನಾಡುವಂತೆ ನಿರರ್ಗಳವಾಗಿ ಮಾತನಾಡಲು, ಗೊಂದಲ ಅಥವಾ ಯಾವುದೇ ಮುಜುಗರ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೇಡಿಯಾ ಕ್ಷಮೆಯಾಚಿಸಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ. ಅಲ್ಲದೇ ಮರಾಠಿ ಭಾಷೆ ಮೇಲಿನ ರಾಜ್ ಠಾಕ್ರೆ ಅವರ ಅಭಿಮಾನವನ್ನು ಶ್ಲಾಘಿಸಿದ್ದಾರೆ.
ಇದಕ್ಕೂ ಮುನ್ನಾ ರಾಜ್ ಠಾಕ್ರೆ ಅವರನ್ನು ಗುರಿಯನ್ನಾಗಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಕೇಡಿಯಾ, 30 ವರ್ಷದಿಂದ ಮುಂಬೈನಲ್ಲಿ ವಾಸಿಸುತ್ತಿದ್ದರೂ ನನಗೆ ಮರಾಠಿ ಸರಿಯಾಗಿ ಬರುತ್ತಿಲ್ಲ. ಭಾಷೆ ಉಳಿಸುವ ಸೋಗು ಹಾಕಿಕೊಂಡಿರುವ ನಿಮ್ಮಂತರವರನ್ನು ನೋಡಿದ ಮೇಲಂತೂ ಮರಾಠಿ ಕಲಿಯಬಾರದು ಎಂದು ಪ್ರತಿಜ್ಞೆ ಮಾಡಿದ್ದೇನೆ. ಏನು ಮಾಡೋಣ ಹೇಳು ಎಂದು ಸವಾಲು ಹಾಕಿದ್ದರು.
ಇದರಿಂದ ಕೆರಳಿದ MNS ಕಾರ್ಯಕರ್ತರು, ಕೇಡಿಯಾ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಈ ದಾಳಿ ಸಂಬಂಧ ಐವರು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆಎಂದು ವರ್ಲಿ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.
Advertisement