
ಪಾಲಕ್ಕಾಡ್: ಕೇರಳದಲ್ಲಿ ಮಾರಕ ನಿಫಾ ವೈರಸ್ ಮತ್ತೆ ವಕ್ಕರಿಸಿದ್ದು, ಪಾಲಕ್ಕಾಡ್‌ನ 38 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಮಲಪ್ಪುರಂನ 18 ವರ್ಷದ ಯುವತಿ ಸಾವನ್ನಪ್ಪಿದ್ದಳು. ಯುವತಿಯಲ್ಲಿ ನಿಫಾ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದಿತ್ತು. ಇಬ್ಬರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ರವಾನಿಸಲಾಗಿತ್ತು. ಇದೀಗ ಇಬ್ಬರಲ್ಲೂ ಸೋಂಕು ಇರುವುದು ದೃಢಪಟ್ಟಿದೆ.
ಜುಲೈ 1 ರಂದು ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಸಾವನ್ನಪ್ಪಿದ್ದರೆ, ಮಲಪ್ಪುರಂನ ಪೆರಿಂಥಲ್ಮನ್ನ ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಬ್ಬ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೋಝಿಕ್ಕೋಡ್, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮೂರು ಜಿಲ್ಲೆಗಳ ಅಧಿಕಾರಿಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಮತ್ತು ಸಂಘಟಿತ ನಿಯಂತ್ರಣ ಮತ್ತು ಕಣ್ಗಾವಲು ಆರಂಭಿಸುವಂತೆ ನಿರ್ದೇಶನ ನೀಡಿದ್ದಾರೆ.
ಜೂನ್ 28 ರಂದು, ಅತೀವ್ರ ಜ್ವರ ಮತ್ತು ಅತೀವ್ರ ವಾಂತಿಯಿಂದ ನಿತ್ರಾಣಗೊಂಡಿದ್ದ ಯುವತಿಯನ್ನು ಕೊಟ್ಟಕ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಕೋಝಿಕೋಡ್‌ಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಗೆ ಕರೆತರುವ ವೇಳೆ ಯುವತಿಯ ಮೆದುಳು ನಿಷ್ಕ್ರಿಯಗೊಂಡಿದೆ. ಇದೀಗ ಯುವತಿಯ ಸಂಪರ್ಕದಲ್ಲಿದ್ದ 43 ಆರೋಗ್ಯ ಕಾರ್ಯಕರ್ತರು, ಜೊತೆಗಿದ್ದವರನ್ನುಕ್ವಾರಂಟೈನ್ ಮಾಡಲಾಗಿದೆ.
ಪಾಲಕ್ಕಾಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಪ್ರಸ್ತುತ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ. ಮಹಿಳೆಗೆ ಸುಮಾರು 20 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಎರಡು ಸ್ಥಳಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆನ್ನಲಾಗಿದೆ,
ಮನೆಯ ಸಮೀಪವಿರುವ ಸ್ಥಳೀಯ ಕ್ಲಿನಿಕ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇವರೊಂದಿಗೆ ಸಂಪರ್ಕದಲ್ಲಿದ್ದವರ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಆರೋಗ್ಯ ಇಲಾಖೆಯ ಪ್ರಕಾರ, ಮಲಪ್ಪುರಂನಿಂದ 211 ಜನರು, ಪಾಲಕ್ಕಾಡ್‌ನಿಂದ 91 ಜನರು ಮತ್ತು ಕೋಝಿಕೋಡ್‌ನಿಂದ 43 ಜನರು ಈ ಇಬ್ಬರು ವ್ಯಕ್ತಿಗಳ ಸಂಪರ್ಕ ಪಟ್ಟಿಯಲ್ಲಿದ್ದರು ಎಂದು ಮಾಹಿತಿ ನೀಡಿದೆ.
Advertisement