ನವದೆಹಲಿ: ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರ ರಾಜ್ಯವನ್ನು ಭಾರತದ ಅಪರಾಧ ರಾಜಧಾನಿಯನ್ನಾಗಿ ಪರಿವರ್ತಿಸಿದ್ದಾರೆಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪಾಟ್ನಾದಲ್ಲಿ ಉದ್ಯಮಿ ಗೋಪಾಲ್ ಖೇಮ್ಕಾ ಅವರ ಹತ್ಯೆಯು ಬಿಜೆಪಿ ಮತ್ತು ನಿತೀಶ್ ಕುಮಾರ್ ಒಟ್ಟಾಗಿ ಬಿಹಾರ ರಾಜ್ಯವನ್ನು "ಭಾರತದ ಅಪರಾಧ ರಾಜಧಾನಿ"ಯನ್ನಾಗಿ ಮಾಡಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಸ್ತುತ ಬಿಹಾರದ ಜನರು ದರೋಡೆ, ಗುಂಡಿನ ದಾಳಿ ಮತ್ತು ಕೊಲೆಯ ನೆರಳಿನಲ್ಲಿ ಬದುಕುತ್ತಿದ್ದಾರೆ. ಅಪರಾಧ ಇಲ್ಲಿ ಸಾಮಾನ್ಯವಾಗಿ ಹೋಗಿದೆ, ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಬಿಹಾರ ರಾಜ್ಯದ ಸಹೋದರ ಸಹೋದರಿಯರೇ, ಇನ್ನು ಈ ಅನ್ಯಾಯವನ್ನುಸಹಿಸಲು ಸಾಧ್ಯವಿಲ್ಲ, ನಿಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗದ ಸರ್ಕಾರ ಭವಿಷ್ಯದ ಜವಾಬ್ದಾರಿಯನ್ನು ಕೂಡ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಕೊಲೆ, ಪ್ರತಿಯೊಂದು ದರೋಡೆ, ಪ್ರತಿಯೊಂದು ಗುಂಡು-ಬದಲಾವಣೆಯ ಕೂಗಾಗಲಿದೆ. ಇದೀಗ ಭಯವಿಲ್ಲ, ಪ್ರಗತಿಪರವಾದ ಹೊಸ ಬಿಹಾರ ಕಟ್ಟುವ ಸಮಯ ಬಂದಿದೆ. ಈ ಬಾರಿ ಮತ ಚಲಾಯಿಸುವುದು ಸರ್ಕಾರವನ್ನು ಬದಲಾಯಿಸಲು ಮಾತ್ರವಲ್ಲದೆ, ಬಿಹಾರವನ್ನು ಉಳಿಸುವ ಸಲುವಾಗಿ ಆಗಬೇಕೆಂದು ಕರೆ ನೀಡಿದ್ದಾರೆ.
ಬಿಹಾರ ಮೂಲದ ಉದ್ಯಮಿ ಹಾಗೂ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ಪಾಟ್ನಾದ ಅವರ ಮನೆಯ ಮುಂದೆ ಗುಂಡಿಕ್ಕಿ ಕೊಲ್ಲಲಾಗಿದೆ.
ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ‘ಪನಾಚೆ’ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಖೇಮ್ಕಾ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಗುಂಡಿನ ದಾಳಿಗೆ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ
Advertisement