
ರಾಮನಾಥಪುರಂ: ತಮಿಳುನಾಡಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಆಟವಾಡುತ್ತಾ ರಸ್ತೆಗೆ ಬಂದ 3 ವರ್ಷದ ಹೆಣ್ಣುಮಗು ಮೇಲೆ ಆಟೋ ರಿಕ್ಷಾ ಹರಿದು ಸಾವನ್ನಪ್ಪಿರುವ ಧಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ರಾಮನಾಥಪುರಂನ ಚಿನ್ನ ಕಡೈ ಬೀದಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ಘಟನೆ ಶುಕ್ರವಾರ (ಜುಲೈ 04) ಪಟ್ಟಣದ ಹೃದಯಭಾಗದಲ್ಲಿರುವ ಚಿನ್ನ ಕಡೈ ನಲ್ಲಿರುವ ಜನವಸತಿ ಪ್ರದೇಶದ ಕಿರಿದಾದ ಬೀದಿಯಲ್ಲಿ ನಡೆದಿದೆ. ಜನರು ನಡೆದುಕೊಂಡು ಹೋಗುತ್ತಿರುವ ಕಿರಿದಾದ ಬೈಲೇನ್‌ಗೆ ಆಟೋರಿಕ್ಷಾ ಪ್ರವೇಶಿಸಿದ್ದು, ಇದೇ ಸಂದರ್ಭದಲ್ಲಿ ಮನೆಯಿಂದ ಹೊರೆಗೆ ಓಡಿ ಬಂದ 3 ವರ್ಷದ ಮಗು ಆಟೋಗೆ ಢಿಕ್ಕಿಯಾಗುತ್ತದೆ.
ನೋಡ ನೋಡುತ್ತಲೇ ಮಗು ಆಟೋ ಕೆಳಗೆ ಬಿದ್ದು ಆಟೋ ಮಗುವಿನ ಮೇಲೆ ಹರಿಯುತ್ತದೆ. ವಾಹನದ ಹಿಂಬದಿಯ ಚಕ್ರ ಮಗುವಿನ ಮೇಲೆ ಹರಿದಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಸ್ಥಳದಲ್ಲಿದ್ದ ಜನರು ಆಘಾತದಿಂದ ಕಿರುಚುತ್ತಾ ಮಗುವಿನ ಸಹಾಯಕ್ಕಾಗಿ ಮಗುವಿನ ಕಡೆಗೆ ಧಾವಿಸುತ್ತಾರೆ. ಆಟೋ ಚಾಲಕ ಕೂಡ ತನ್ನ ಆಟೋದಿಂದ ಇಳಿದು ಮಗುವಿಗೆ ಸಹಾಯ ಮಾಡಲು ಧಾವಿಸುತ್ತಾರೆ.
ಈ ವೇಳೆ ಮಗುವಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ ದುರಾದೃಷ್ಟವಶಾತ್ ಅಷ್ಟು ಹೊತ್ತಿಗಾಗಲೇ ಮಗು ಸಾವನ್ನಪ್ಪಿರುತ್ತದೆ.
ಇದೀಗ ರಾಮನಾಥಪುರಂ ಪೊಲೀಸ್ ಅಧಿಕಾರಿಗಳು ಅಪಘಾತದ ಬಗ್ಗೆ ತನಿಖೆ ಆರಂಭಿಸಿದ್ದಾರೆ ಮತ್ತು ಅಪಘಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.
Advertisement