
ಗೊಂಡಾ: ಸರ್ಕಾರಿ ಕೆಲಸಕ್ಕಾಗಿ ಕಚೇರಿಗೆ ಆಗಮಿಸಿದ್ದ 22 ವರ್ಷದ ಯುವತಿಯನ್ನು 60 ವರ್ಷದ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಓರ್ವ ಬಲವಂತವಾಗಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಕೆಲಸ ಅರಸಿ ಬಂದಿದ್ದ ಯುವತಿಯನ್ನು 60 ವರ್ಷದ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಹರಿವಂಶ್ ಶುಕ್ಲಾ ಎಂಬಾತ ತನ್ನ ಕಾಮುಕತನಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದಾನೆ.
ಮೂಲಗಳ ಪ್ರಕಾರ 22 ವರ್ಷದ ಯುವತಿ ಸರ್ಕಾರಿ ಕಚೇರಿಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಳು. ಈ ಸಂಬಂಧ ವಿಚಾರಿಸಲು ಆಕೆ ಕಚೇರಿಗೆ ಆಗಮಿಸಿ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಹರಿವಂಶ್ ಶುಕ್ಲಾ ಬಳಿ ವಿಚಾರಿಸಿದ್ದಾಳೆ.
ಈ ವೇಳೆ ಮುದುಕ ಹರಿವಂಶ್ ಶುಕ್ಲಾ ತನ್ನ ವಕ್ರಬುದ್ಧಿ ತೋರಿಸಿದ್ದು, ಆಕೆಯನ್ನು ಕಚೇರಿಯೊಳಗೆ ಕರೆದೊಯ್ದು ನೀನು ನಾನು ಹೇಳಿದ ಹಾಗೆ ಕೇಳಿದರೆ ನಿನ್ನ ಕೆಲಸವಾಗುತ್ತದೆ ಎಂದು ಹೇಳಿದ್ದಾನೆ. ಒಂದು ಹಂತದಲ್ಲಿ ಆಕೆ ಒಪ್ಪದಿದ್ದಾಗ ಚಾಕು ತೋರಿಸಿ ಆಕೆಯನ್ನು ಬೆದರಿಸಿದ್ದಾನೆ ಎನ್ನಲಾಗಿದೆ.
ಬಳಿಕ ಆಕೆಯನ್ನು ಬಲವಂತವಾಗಿ ತಬ್ಬಿಕೊಳ್ಳಲು ಮುಂದಾಗಿ ಮುತ್ತುಕೊಡಲು ಮುಂದಾಗಿದ್ದಾನೆ. ನನ್ನ ಆಸೆ ತೀರಿಸಿದರೆ ನಿನ್ನ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದ ಹರಿವಂಶ್ ಶುಕ್ಲಾ ಆಕೆಯನ್ನು ತನ್ನ ಕ್ವಾರ್ಟರ್ಸ್ ಗೆ ಬರುವಂತೆಯೂ ಕೇಳಿದ್ದಾನೆ. ಈತನ ವಕ್ರ ಬುದ್ದಿ ಮೊದಲೇ ತಿಳಿದಿದ್ದ ಯುವತಿ ಕಚೇರಿಯ ಕಿಟಕಿಯಲ್ಲಿ ತನ್ನ ಸ್ನೇಹಿತರನ್ನು ಇರಿಸಿ ಅವರಿಂದ ಆತನ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುವಂತೆ ಕೇಳಿದ್ದಾಳೆ.
ಇದೀಗ ಇದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಇದೀಗ ಯುವತಿ ಈ ವಿಡಿಯೋವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಹರಿವಂಶ್ ಶುಕ್ಲಾನ ಕಾಮುಕತನವನ್ನು ನೋಡಿದ ಅಧಿಕಾರಿಗಳು ಕೂಡಲೇ ಆತನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಅಲ್ಲದೆ ಯುವತಿ ಈ ಸಂಬಂಧ ಪೊಲೀಸ್ ದೂರು ಕೂಡ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement