
ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅವರು ದಲೈ ಲಾಮಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ ಮತ್ತು ಅವರ 90ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಭಾರತೀಯ ಸಚಿವರು ಭಾಗವಹಿಸಿದ್ದಕ್ಕೆ ಚೀನಾ ಸೋಮವಾರ ಪ್ರತಿಭಟನೆ ವ್ಯಕ್ತಪಡಿಸಿದೆ.
ಟಿಬೆಟ್ ಸಂಬಂಧಿತ ವಿಷಯಗಳಲ್ಲಿ ಬೀಜಿಂಗ್‌ನ ಸೂಕ್ಷ್ಮತೆಯನ್ನು ಗೌರವಿಸುವಂತೆ ಭಾರತಕ್ಕೆ ಚೀನಾ ಕೇಳಿಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.
"ಟಿಬೆಟ್ ಸಂಬಂಧಿತ ವಿಷಯಗಳ ಬಗ್ಗೆ ಚೀನಾ ಸರ್ಕಾರದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ" ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಬೀಜಿಂಗ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ದಲೈ ಲಾಮ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ಅವರ ಶುಭಾಶಯಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಭಾರತೀಯ ಅಧಿಕಾರಿಗಳು ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹಾಜರಿದ್ದ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮಾವೋ, "ವ್ಯಾಪಕವಾಗಿ ತಿಳಿದಿರುವಂತೆ, 14ನೇ ದಲೈ ಲಾಮಾ ರಾಜಕೀಯ ದೇಶಭ್ರಷ್ಟರಾಗಿದ್ದು, ಅವರು ದೀರ್ಘಕಾಲದಿಂದ ಚೀನಾ ವಿರೋಧಿ ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಧರ್ಮದ ಸೋಗಿನಲ್ಲಿ ಕ್ಸಿಜಾಂಗ್‌ರನ್ನು ಚೀನಾದಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. ಬೀಜಿಂಗ್ ಟಿಬೆಟ್ ನ್ನು "ಕ್ಸಿಜಾಂಗ್" ಎಂದು ಉಲ್ಲೇಖಿಸುತ್ತದೆ.
"ಕ್ಸಿಜಾಂಗ್‌ಗೆ ಸಂಬಂಧಿಸಿದ ವಿಷಯಗಳ ಸೂಕ್ಷ್ಮತೆಯನ್ನು ಭಾರತ ಸಂಪೂರ್ಣವಾಗಿ ಅರಿತುಕೊಳ್ಳಬೇಕು 14ನೇ ದಲೈ ಲಾಮಾ ಅವರ ಚೀನಾ ವಿರೋಧಿ ಮತ್ತು ಪ್ರತ್ಯೇಕತಾವಾದಿ ಸ್ವಭಾವವನ್ನು ಸ್ಪಷ್ಟವಾಗಿ ನೋಡಬೇಕು ಕ್ಸಿಜಾಂಗ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ಭಾರತ ಚೀನಾಕ್ಕೆ ಮಾಡಿರುವ ಬದ್ಧತೆಗಳನ್ನು ಗೌರವಿಸಬೇಕು, ವಿವೇಕದಿಂದ ವರ್ತಿಸಬೇಕು ಮತ್ತು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಆ ವಿಷಯಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಚೀನಾ ಭಾರತದ ಕ್ರಮಗಳ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿದೆ" ಎಂದು ಅವರು ಹೇಳಿದ್ದಾರೆ.
ಭಾನುವಾರ, ಪ್ರಧಾನಿ ಮೋದಿ ದಲೈ ಲಾಮಾ ಅವರ ಜನ್ಮದಿನದಂದು ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದರು. "ಅವರ ಸಂದೇಶವು ಎಲ್ಲಾ ನಂಬಿಕೆಗಳಲ್ಲಿ ಗೌರವ ಮತ್ತು ಮೆಚ್ಚುಗೆಯನ್ನು ಪ್ರೇರೇಪಿಸಿದೆ. ಅವರ ನಿರಂತರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾವು ಪ್ರಾರ್ಥಿಸುತ್ತೇವೆ" ಎಂದು ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ರಾಜೀವ್ ರಂಜನ್ ಸಿಂಗ್, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಸಿಕ್ಕಿಂ ಸಚಿವೆ ಸೋನಮ್ ಲಾಮಾ ಸೇರಿದಂತೆ ಹಲವಾರು ಭಾರತೀಯ ನಾಯಕರು ಧರ್ಮಶಾಲಾದಲ್ಲಿ ನಡೆದ ದಲೈ ಲಾಮ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದಲೈ ಲಾಮಾ ಅವರ ಉತ್ತರಾಧಿಕಾರಿ ಪ್ರಕ್ರಿಯೆ ಟಿಬೆಟಿಯನ್ ಆಧ್ಯಾತ್ಮಿಕ ನಾಯಕನ ಸ್ವಂತ ಆಶಯಗಳಿಂದ ಮಾರ್ಗದರ್ಶಿಸಲ್ಪಡಬೇಕು ಎಂಬ ಕಳೆದ ವಾರ ರಿಜಿಜು ಅವರ ಹೇಳಿಕೆಗೆ ಚೀನಾ ಈ ಹಿಂದೆ ಆಕ್ಷೇಪಣೆಗಳನ್ನು ಎತ್ತಿತ್ತು. ದ್ವಿಪಕ್ಷೀಯ ಸಂಬಂಧಗಳಲ್ಲಿ ಸಂಭವನೀಯ ಹಿನ್ನಡೆಗಳನ್ನು ತಡೆಗಟ್ಟಲು ಟಿಬೆಟ್ ಸಂಬಂಧಿತ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ವರ್ತಿಸುವಂತೆ ಬೀಜಿಂಗ್ ಭಾರತವನ್ನು ಒತ್ತಾಯಿಸಿತು.
Advertisement