Online ಬೆಟ್ಟಿಂಗ್ ಆ್ಯಪ್: ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ನಟಿ ಪ್ರಣೀತಾ ಸೇರಿ 29 ಮಂದಿ ವಿರುದ್ಧ FIR ದಾಖಲು!

ನಟ, ನಟಿಯರ ಜೊತೆಗೆ ಸಾಮಾಜಿಕ ಮಾಧ್ಯಮ ಇನ್‌ಫ್ಲುಯನ್ಸರ್‌, ಯುಟ್ಯೂಬರ್‌ಗಳು ಈ ಪಟ್ಟಿಯಲ್ಲಿದ್ದಾರೆ ಎಂದು ಇಡಿ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.
ED books 29 actors
ವಿಜಯ್ ದೇವರಕೊಂಡ,ಪ್ರಕಾಶ್ ರಾಜ್, ಪ್ರಣೀತಾ
Updated on

ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿನಿಮಾ ನಟ-ನಟಿಯರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ನಟಿ ಪ್ರಣೀತಾ ಸುಭಾಷ್ ಸೇರಿ 29 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಕರಣದ ದಾಖಲಿಸಿದೆ.

ನಟ, ನಟಿಯರ ಜೊತೆಗೆ ಸಾಮಾಜಿಕ ಮಾಧ್ಯಮ ಇನ್‌ಫ್ಲುಯನ್ಸರ್‌, ಯುಟ್ಯೂಬರ್‌ಗಳು ಈ ಪಟ್ಟಿಯಲ್ಲಿದ್ದಾರೆ ಎಂದು ಇಡಿ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.

ಸೆಲೆಬ್ರಿಟಿಗಳು ಮತ್ತು ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳು ಅಕ್ರಮ ಬೆಟ್ಟಿಂಗ್​ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ವ್ಯಾಪಕವಾಗಿ ಪ್ರಚಾರ ಮಾಡಿದ್ದು, ಪ್ರಚಾರ ಮಾಡಲು ಭಾರಿ ಕಮಿಷನ್ ಮತ್ತು ಸಂಭಾವನೆ ಪಡೆದಿದ್ದಾರೆ ಎಂದು ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಅಪ್ಲಿಕೇಶನ್‌ಗಳಿಂದಾಗಿ ಸಾಲದ ಹೊರೆಯಿಂದ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಹೈದರಾಬಾದ್​ ಪೊಲೀಸರು ಈಗಾಗಲೇ ಎಫ್‌ಐಆರ್‌ ದಾಖಲಿಸಿ, ವಿಚಾರಣೆ ನಡೆಸಿದ್ದಾರೆ. ಹೈದರಾಬಾದ್ ಮತ್ತು ಸೈಬರಾಬಾದ್ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣ ದಾಖಲಿಸಿದೆ.

ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಪ್ರಚಾರ ಪ್ರಕರಣದಲ್ಲಿ ಪಂಜಾಗುಟ್ಟ ಪೊಲೀಸರು ಈಗಾಗಲೇ ನಿರೂಪಕರಾದ ವಿಷ್ಣು ಪ್ರಿಯಾ, ರಿತು ಚೌಧರಿ, ಶ್ರೀಮುಖಿ ಮತ್ತು ಶ್ಯಾಮಾ ಅವರನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಇಡಿ ಅಧಿಕಾರಿಗಳು ಸೆಲೆಬ್ರಿಟಿಗಳಾದ ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಪ್ರಣೀತಾ ಸುಭಾಷ್, ನಿಧಿ ಅಗರ್ವಾಲ್, ಶ್ರೀಮುಖಿ, ರಿತು ಚೌಧರಿ, ಆ್ಯಂಕರ್ ಶ್ಯಾಮಲಾ, ಅನನ್ಯ ನಾಗಲ್ಲ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ED books 29 actors
ಬೆಟ್ಟಿಂಗ್ ಆ್ಯಪ್ ಪ್ರಚಾರ: ಪ್ರಕಾಶ್ ರಾಜ್, ದೇವರಕೊಂಡ, ರಾಣಾ ಸೇರಿ 25 ಮಂದಿ ವಿರುದ್ಧ ಪ್ರಕರಣ ದಾಖಲು

ಇದಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವ ಬೀರಿರುವ ನೀತು ಅಗರ್ವಾಲ್, ವಿಷ್ಣು ಪ್ರಿಯಾ, ವರ್ಷಿಣಿ, ಸಿರಿ ಹನುಮಂತು, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪದ್ಮಾವತಿ, ಪಾಂಡು, ಇಮ್ರಾನ್ ಖಾನ್, ಹರ್ಷ ಸಾಯಿ, ಬಯ್ಯ ಸನ್ನಿ ಯಾದವ್, ಟೇಸ್ಟಿ ಸುಪ್ರೇಜಾ ಸೇರಿ ಕೆಲವು ಯೂಟ್ಯೂಬರ್‌ಗಳ ವಿರುದ್ಧವೂ ಇಡಿ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದೆ.

ಐದು ರಾಜ್ಯಗಳ ಪೊಲೀಸರು ದಾಖಲಿಸಿಕೊಂಡಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ಆಧರಿಸಿ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.

ಇದರಲ್ಲಿ ಆರೋಪಿತರು ಬೆಟ್ಟಿಂಗ್‌ ಮತ್ತಿತರ ಜೂಜುಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣವನ್ನು ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಸೆಲೆಬ್ರಿಟಿಗಳು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಾದ ಜಂಗಲ್‌ ರಮ್ಮಿ, ಜೀತ್‌ವಿನ್‌, ಲೋಟಸ್‌365 ಸೇರಿದಂತೆ ಹಲವು ಆ್ಯಪ್‌ಗಳ ಪರ ಪ್ರಚಾರ ನಡೆಸಿದ್ದಾರೆ. ಇದಕ್ಕಾಗಿ ಹಣ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಆ್ಯಪ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದು ತಿಳಿದಿಲ್ಲ ಹಾಗೂ ಕಾನೂನು ಬಾಹಿರವಾದ ಬೆಟ್ಟಿಂಗ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿಲ್ಲ ಎಂದು ಪ್ರಕರಣದಲ್ಲಿ ಹೆಸರಿರುವ ಕೆಲ ಜನಪ್ರಿಯ ವ್ಯಕ್ತಿಗಳು ಈ ಹಿಂದೆ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣ ಕುರಿತು ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಇನ್ನೂ ಕೆಲ ಎಫ್‌ಐಆರ್‌ಗಳನ್ನು ED ಕಲೆಹಾಕುತ್ತಿದ್ದು, ಶೀಘ್ರದಲ್ಲಿ ಇವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಆ್ಯಪ್‌ಗಳು ಅಕ್ರಮವಾಗಿ ಸಂಗ್ರಹಿಸಿದ ಮೊತ್ತವನ್ನು ಕಲೆ ಹಾಕಲಾಗುತ್ತಿದೆ. ಹೇಳಿಕೆಗಳು ಮತ್ತು ದಾಖಲೆಗಳನ್ನು ಆಧರಿಸಿ ಸೆಲೆಬ್ರಿಟಿಗಳ ಕೃತ್ಯದ ಪ್ರಮಾಣವನ್ನು ನಿರ್ಧರಿಸಲಾಗುವುದು’ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com