
ನವದೆಹಲಿ: ತೆಲಂಗಾಣ ರಾಜಾದ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಫೈರ್ ಬ್ರಾಂಡ್ ಶಾಸಕ ರಾಜಾ ಸಿಂಗ್ (RajaSingh) ಗೆ ಬಿಜೆಪಿ ಹೈಕಮಾಂಡ್ ಶಾಕ್ ಕೊಟ್ಟಿದೆ.
ಹೌದು.. ತೆಲಂಗಾಣದ ಬಿಜೆಪಿ ಪಕ್ಷದ ಫೈರ್ ಬ್ರಾಂಡ್ ಹಾಗೂ ಖಟ್ಟರ್ ಹಿಂದುತ್ವವಾದಿ ಶಾಸಕ T ರಾಜಾ ಸಿಂಗ್ ಗೆ ಬಿಜೆಪಿ ಹೈಕಮಾಂಡ್ ಆಘಾತ ನೀಡಿದ್ದು, ಈ ಹಿಂದೆ ಅವರು ಸಲ್ಲಿಕೆ ಮಾಡಿದ್ದ ರಾಜಿನಾಮೆಯನ್ನು ಅಂಗೀಕರಿಸಿದೆ.
ತೆಲಂಗಾಣದ ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜಿನಾಮೆ ನೀಡಿದ್ದರು. ಅವರ ರಾಜಿನಾಮೆ ವಿಚಾರ ತೆಲಂಗಾಣದಲ್ಲಿ ರಾಜಕೀಯವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಇದೀಗ ಈ ಘಟನೆಯ ಮುಂದುವರೆದ ಭಾಗವಾಗಿ ಬಿಜೆಪಿ ಹೈಕಮಾಂಡ್ ರಾಜಾ ಸಿಂಗ್ ರ ರಾಜಿನಾಮೆಯನ್ನು ಅಂಗೀಕರಿಸಿದೆ. ಈ ಕುರಿತು ಬಿಜೆಪಿ ಹೈಕಮಾಂಡ್ ಶಾಸಕ ರಾಜಾ ಸಿಂಗ್ ಪತ್ರವೊಂದನ್ನು ಕೂಡ ಬರೆದಿದ್ದು, ಅಲ್ಲಿ ರಾಜಿನಾಮೆ ಅಂಗೀಕಾರದ ಕುರಿತು ಮಾಹಿತಿ ನೀಡಿದೆ.
ನಡ್ಡಾ ಪತ್ರದಲ್ಲೇನಿದೆ?
ನಮಸ್ಕಾರ, ಇದು ಬಿಜೆಪಿ ತೆಲಂಗಾಣ ರಾಜ್ಯ ಅಧ್ಯಕ್ಷರಾದ ಜಿ. ಕಿಶನ್ ರೆಡ್ಡಿ ಅವರಿಗೆ ನೀವು ಪಕ್ಷಕ್ಕೆ ರಾಜೀನಾಮೆ ನೀಡಿರುವ ಕುರಿತು ಜೂನ್ 30, 2025 ರಂದು ಬರೆದ ಪತ್ರ ಸಂಖ್ಯೆ 1041 ರ ಉಲ್ಲೇಖವಾಗಿದೆ. ಮೇಲೆ ತಿಳಿಸಲಾದ ಪತ್ರವನ್ನು ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರ ಗಮನಕ್ಕೆ ತರಲಾಗಿದೆ ಎಂದು ಪತ್ರದಲ್ಲಿ ಹೇಳಿದೆ.
ಅಂತೆಯೇ, 'ನೀವು ಉಲ್ಲೇಖಿಸಿರುವ ವಿಷಯಗಳು ಅಪ್ರಸ್ತುತ ಮತ್ತು ಪಕ್ಷದ ಕಾರ್ಯವೈಖರಿ, ಸಿದ್ಧಾಂತ ಮತ್ತು ತತ್ವಗಳಿಗೆ ಹೊಂದಿಕೆಯಾಗುವುದಿಲ್ಲ. ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರ ನಿರ್ದೇಶನದ ಪ್ರಕಾರ, ನಿಮ್ಮ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಎಂದು ನಾನು ತಿಳಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಅವರು ರಾಜಾ ಸಿಂಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ರಾಜ್ಯಾಧ್ಯಕ್ಷರ ಆಯ್ಕೆ ವಿವಾದ
ಇನ್ನು ಶಾಸಕ ರಾಜಾ ಸಿಂಗ್ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಎನ್ ರಾಮಚಂದ್ರ ರಾವ್ ಅವರನ್ನು ಮುಂದಿನ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ. ಆದರೆ ರಾಮಚಂದ್ರ ರಾವ್ ಅವರ ಆಯ್ಕೆಗೆ ರಾಜಾ ಸಿಂಗ್ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು.
Advertisement