ಪಾಟ್ನಾ: ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಚಂದನ್ ಕುಮಾರ್ ಅಲಿಯಾಸ್ ಚಂದನ್ ಮಿಶ್ರಾ ಎಂಬಾತನನ್ನು ಗುರುವಾರ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಸದ್ಯ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವ ಚಂದನ್ ಬಕ್ಸಾರ್ ಜಿಲ್ಲೆಯವರಾಗಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಗೆ ನುಗ್ಗಿದ ದಾಳಿಕೋರರು ಗುಂಡು ಹಾರಿಸಿ ಕೊಂದಿದ್ದಾರೆ.
ಘಟನೆಯನ್ನು ದೃಢಪಡಿಸಿದ ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಾರ್ತಿಕೇಯ ಶರ್ಮಾ, ಮೃತರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾದ ಬೇವೂರ್ ಕೇಂದ್ರ ಜೈಲಿನಲ್ಲಿ ಇರಿಸಲಾಗಿತ್ತು. ಜೈಲಿನಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಪೆರೋಲ್ ಮೇಲೆ ಬಿಡುಗಡೆ ಮಾಡಿ, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು' ಎಂದು ಹೇಳಿದರು.
ಗ್ಯಾಂಗ್‌ಗಳ ನಡುವಿನ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ. 'ವಿಚಾರಣಾಧೀನ ಕೈದಿಯ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪಿಗಳ ಗುರುತನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಆಸ್ಪತ್ರೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಎಸ್‌ಪಿ ಹೇಳಿದರು.
ಹಗಲು ಹೊತ್ತಿನಲ್ಲಿ ಆಸ್ಪತ್ರೆಗೆ ನುಗ್ಗಿ ವಿಚಾರಣಾಧೀನ ಕೈದಿಯ ಹತ್ಯೆ ಮಾಡಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಮುಖ ಉದ್ಯಮಿ ಗೋಪಾಲ್ ಖೇಮ್ಕಾ, ವಕೀಲ ಜಿತೇಂದ್ರ ಕುಮಾರ್ ಮೆಹ್ತಾ ಮತ್ತು ಮರಳು ಡೀಲರ್ ರಮಾಕಾಂತ್ ಯಾದವ್ ಕೂಡ ಇತ್ತೀಚೆಗೆ ಗುಂಡೇಟಿಗೆ ಬಲಿಯಾಗಿದ್ದರು.
ಬಿಹಾರ ಪೊಲೀಸರ ವಿಶೇಷ ಕಾರ್ಯಪಡೆ (STF) ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಂತಕರ ಡೇಟಾ ಬ್ಯಾಂಕ್ ಅನ್ನು ನಿರ್ವಹಿಸಲು ಪ್ರತ್ಯೇಕ 'ಕೋಶ'ವನ್ನು ಸ್ಥಾಪಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) (ಪ್ರಧಾನ ಕಚೇರಿ) ಕುಂದನ್ ಕೃಷ್ಣನ್, 'ಕೆಲವು ಯುವಕರು ಹಣಕ್ಕಾಗಿ ಗುತ್ತಿಗೆ ಕೊಲೆಗಳಲ್ಲಿ ಭಾಗಿಯಾಗುತ್ತಿರುವುದು ಕಂಡುಬಂದಿದೆ. ಗುತ್ತಿಗೆ ಹಂತಕರ ಮೇಲೆ ನಿಗಾ ಇಡಲು ಹೊಸ ಕೋಶವನ್ನು ರಚಿಸಲಾಗಿದೆ. ಭವಿಷ್ಯದಲ್ಲಿ ಅವರ ಚಟುವಟಿಕೆಗಳನ್ನು ಪರಿಶೀಲಿಸಲು ಈ ಗುತ್ತಿಗೆ ಹಂತಕರ ಡೇಟಾ ಬ್ಯಾಂಕ್ ಅನ್ನು ನಿರ್ವಹಿಸಲಾಗುವುದು' ಎಂದು ಹೇಳಿದರು.
ಪ್ರತಿಯೊಬ್ಬ ಗುತ್ತಿಗೆ ಹಂತಕರ ಸಂಪೂರ್ಣ 'ದಾಖಲೆ'ಯನ್ನು ಸಿದ್ಧಪಡಿಸಲಾಗುವುದು. ಜೈಲಿನಿಂದ ಹೊರಬಂದ ನಂತರವೂ ಅವರ ಚಲನವಲನಗಳನ್ನು ಪತ್ತೆಹಚ್ಚಲು ಸಾಧ್ಯವಾಗುವಂತೆ ಅವರ ಭೌತಿಕ ವಿವರಣೆ, ಛಾಯಾಚಿತ್ರ, ಹೆಸರು, ವಿಳಾಸ ಮತ್ತು ಇತರ ವಿವರಗಳನ್ನು ಸೆಲ್‌ನಲ್ಲಿ ಇರಿಸಲಾಗುತ್ತದೆ. ಜಿಲ್ಲಾ ಪೊಲೀಸರಿಗೆ ಅಂತಹ ಗುತ್ತಿಗೆ ಹಂತಕರ ಮೇಲೆ ನಿಗಾ ಇಡಲು ತಿಳಿಸಲಾಗಿದೆ ಎಂದು ಅವರು ಹೇಳಿದರು.
ಕಾನೂನುಬಾಹಿರ ಚಟುವಟಿಕೆಗಳ ಮೂಲಕ ಹಣ ಅಥವಾ ಆಸ್ತಿಗಳನ್ನು ಪಡೆದಿದ್ದಾರೆ ಎನ್ನಲಾದ 1,290 ಜನರನ್ನು ಪೊಲೀಸರು ಗುರುತಿಸಿದ್ದಾರೆ ಮತ್ತು ಅವರ ಆಸ್ತಿಗಳನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳಲಾಗುವುದು. ಇತ್ತೀಚೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯ ನಂತರ ಜಿಲ್ಲೆಗಳ ಅಧಿಕಾರಿಗಳಿಗೆ ಅಂತಹ ವ್ಯಕ್ತಿಗಳ ಡೇಟಾವನ್ನು ಸಂಗ್ರಹಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಎಡಿಜಿ ತಿಳಿಸಿದ್ದಾರೆ.
Advertisement