
ಮುಂಬೈ: ಮಹಾರಾಷ್ಟ್ರದಲ್ಲಿ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಆರಂಭಿಸಿರುವ ಮರಾಠಿ ಅಭಿಯಾನ ತಾರಕಕ್ಕೇರಿರುವಂತೆಯೇ ಇತ್ತ ಮಹಾರಾಷ್ಟ್ರ ಸಚಿವ Nitesh Rane ಸವಾಲೆಸೆದಿದ್ದಾರೆ.
ಹೌದು.. ಇತ್ತೀಚೆಗೆ ಮರಾಠಿ ಮಾತನಾಡಲು ನಿರಾಕರಿಸಿದ ಅಂಗಡಿಯವನ ಮೇಲೆ ಎಂಎನ್ ಎಸ್ ಕಾರ್ಯಕರ್ತರು ನಡೆಸಿದ ಹಲ್ಲೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ನಡುವೆಯೇ, ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್)ಗೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.
ಮರಾಠಿ ಮಾತನಾಡಲು ಬಾರದ ಮುಸ್ಲಿಮರನ್ನು ಹೊಡೆಯುವ ಧೈರ್ಯ ಎಂಎನ್‌ಎಸ್ ಕಾರ್ಯಕರ್ತರಿಗೆ ಇದೆಯೇ ಎಂದು ಸವಾಲೆಸೆದಿದ್ದಾರೆ. ಅಂತೆಯೇ ಹಿಂದೂಗಳ ಮೇಲೆ ದಾಳಿ ಮಾಡಿದರೆ 'ಮಹಾಯುತಿ' ಸರ್ಕಾರದ "ಮೂರನೇ ಕಣ್ಣು" ಜಾಗೃತಗೊಳ್ಳುತ್ತದೆ ಎಂದು ರಾಣೆ ಎಚ್ಚರಿಸಿದ್ದಾರೆ.
ನಿತೇಶ್ ರಾಣೆ ಹೇಳಿದ್ದೇನು?
"ಗಡ್ಡ ಮತ್ತು ವೃತ್ತಾಕಾರದ ಟೋಪಿಗಳನ್ನು ಹೊಂದಿರುವವರು ಮರಾಠಿ ಮಾತನಾಡುತ್ತಾರೆಯೇ? ಅವರು ಶುದ್ಧ ಮರಾಠಿ ಮಾತನಾಡುತ್ತಾರೆಯೇ? ಅವರಿಗೆ (ಎಂಎನ್‌ಎಸ್ ಕಾರ್ಯಕರ್ತರು) ಮುಸ್ಲಿಂ ಪ್ರದೇಶಗಳಿಗೆ ಹೋಗಿ ಆ ಜನರನ್ನು ಥಳಿಸುವ ಧೈರ್ಯವಿದೆಯೇ? ಜಾವೇದ್ ಅಖ್ತರ್ ಮತ್ತು ಅಮೀರ್ ಖಾನ್ ಮರಾಠಿ ಮಾತನಾಡುತ್ತಾರೆಯೇ? ಅವರನ್ನು (ಅಖ್ತರ್ ಮತ್ತು ಖಾನ್) ಮರಾಠಿ ಮಾತನಾಡುವಂತೆ ಮಾಡುವ ಧೈರ್ಯ ಅವರಿಗೆ ಇಲ್ಲ ಎಂದು ರಾಣೆ ರಾಜ್ ಠಾಕ್ರೆ ವಿರುದ್ಧ ಕಿಡಿಕಾರಿದರು.
ಬಡ ಹಿಂದೂಗಳೇ ಟಾರ್ಗೆಟ್
ಇದೇ ವೇಳೆ ಬಡ ಹಿಂದೂಗಳೇ ಟಾರ್ಗೆಟ್ ಎಂದು ಹೇಳರುವ ರಾಣೆ, 'ಬಡ ಹಿಂದೂಗಳ ಮೇಲೆ ಮಾತ್ರ ದಾಳಿ ಮಾಡಲು ನಿಮಗೆ ಎಷ್ಟು ಧೈರ್ಯ. ಈ ಸರ್ಕಾರ ಹಿಂದೂಗಳಿಂದ ರಚಿಸಲ್ಪಟ್ಟಿದೆ ಮತ್ತು ಹಿಂದುತ್ವ ಮನಸ್ಥಿತಿಯನ್ನು ಹೊಂದಿದೆ. ಆದ್ದರಿಂದ, ಯಾರಾದರೂ ಹಿಂದೂಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರೆ, ನಮ್ಮ ಸರ್ಕಾರದ ಮೂರನೇ ಕಣ್ಣು ಜಾಗೃತಗೊಳ್ಳುತ್ತದೆ" ಎಂದು ರಾಣೆ ಎಚ್ಚರಿಸಿದರು.
ರಾಜ್ ಠಾಕ್ರೆ 'ಮರಾಠಿ ಕಡ್ಡಾಯ' ಅಭಿಯಾನ
ಮುಂಬೈನ ಮೀರಾ ರಸ್ತೆಯಲ್ಲಿರುವ ಸಿಹಿತಿಂಡಿ ಮಾರುವ ಅಂಗಡಿಯಾತ ಮರಾಠಿ ಮಾಡಲಿಲ್ಲ ಎಂಬ ಕಾರಣಕ್ಕೆ ಎಂಎನ್ಎಸ್ ಕಾರ್ಯಕರ್ತರು ಥಳಿಸಿದ್ದ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಬೆನ್ನಲ್ಲೇ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಕಾರ್ಯಕರ್ತರ ನಡೆಯನ್ನು ಬೆಂಬಲಿಸಿದ್ದು ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿ ಮರಾಠಿ ಕಡ್ಡಾಯವಾಗಿ ಮಾತನಾಡಬೇಕು. ಮಾತನಾಡದವರು ಮಹಾರಾಷ್ಟ್ರದಿಂದ ಹೊರಗಟ್ಟಬೇಕು ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮರಾಠಿ ಕಡ್ಡಾಯ ಅಭಿಯಾನ ವ್ಯಾಪಕ ಚುರುಕು ಪಡೆದುಕೊಂಡಿದೆ.
ಇದೇ ವಿಚಾರವಾಗಿ ಕಿಡಿಕಾರಿದ್ದ ಬಿಜೆಪಿ ನಾಯಕ ನಿಶಿಕಾಂತ್ ದುಬೆ, ಮರಾಠಿ ಕಡ್ಡಾಯ ಎನ್ನುವ ಜನರನ್ನುನಾವು ನಿರಂತರವಾಗಿ ಥಳಿಸುತ್ತೇವೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ರಾಜ್ ಠಾಕ್ರೆ, 'ನೀನು ಮುಂಬೈಗೆ ಬಾ.. ನಿನ್ನನ್ನು ಸಮುದ್ರದಲ್ಲಿ ಮುಳುಗಿಸಿ, ಮುಳುಗಿಸಿ ಹೊಡೆಯುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ನಿಶಿಕಾಂತ್ ದುಬೆ, 'ನನ್ನ ಮಾತೃಭಾಷೆ ಹಿಂದಿ ಎಂದು ನನಗೆ ಹೆಮ್ಮೆ ಇದೆ. ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಮಹಾನ್ ರಾಜರಲ್ಲ. ನಾನು ಸಂಸದ, ಮತ್ತು ನಾನು ಕಾನೂನನ್ನು ನನ್ನ ಕೈಗೆ ತೆಗೆದುಕೊಳ್ಳುವುದಿಲ್ಲ. ಆದರೆ ಅವರು ಎಲ್ಲಿಗೆ ಹೋದರೂ ಜನರು ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದರು.
ಅಂದಹಾಗೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ತ್ರಿಭಾಷಾ ನೀತಿಯನ್ನು ವಿರೋಧಿಸುವಲ್ಲಿ ಎಂಎನ್‌ಎಸ್ ಮುಂಚೂಣಿಯಲ್ಲಿದೆ. ಇದಲ್ಲದೆ, ಮರಾಠಿ ತಿಳಿಯದ ಜನರ ಮೇಲೆ ಹಲ್ಲೆ ನಡೆಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
Advertisement