
ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿಯ ಅವಸಾನೇಶ್ವರ ದೇವಸ್ಥಾನದ ಬಳಿ ಕಾಲ್ತುಳಿತದ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿ 32ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಶ್ರಾವಣ ಮಾಸದ ಪವಿತ್ರ ದಿನ ಹಿನ್ನೆಲೆಯಲ್ಲಿ ಹೈದರ್ ಘರ್ ಪ್ರದೇಶದ ಅವಸಾನೇಶ್ವರ ದೇವಸ್ಥಾನದಲ್ಲಿ 'ಜಲಾಭಿಷೇಕ' ಹಿನ್ನೆಲೆಯಲ್ಲಿ ನೂರಾರು ಭಕ್ತರು ದೇವಾಲಯದಲ್ಲಿ ಜಮಾಯಿಸಿದ್ದರು.
ಈ ವೇಳೆ ವಿದ್ಯುತ್ ತಂತಿಯೊಂದು ದೇವಾಲಯದ ಶೆಡ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸ್ಪರ್ಶಿಸಿದೆ. ಇದರಿಂದ ಭಯಭೀತರಾದ ಭಕ್ತರು ಓಡಲಾರಂಭಿಸಿದ್ದು, ಈ ವೇಳೆ ಕಾಲ್ತುಳಿತ ಸಂಭವಿಸಿ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇವಸ್ಥಾನದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಕೋತಿ ಹಾದು ಹೋಗುವ ವೇಳೆ ತಂತಿ ತುಂಡಾಗಿ ದೇವಸ್ಥಾನ ಮೇಲೆ ಬಿದ್ದಿರುವುದೇ ದುರ್ಘಟನೆಗೆ ಪ್ರಮುಖ ಕರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ಕೋತಿಗಳು ತಂತಿ ಮೇಲೆ ಸಾಗಿದ್ದರಿಂದ ತಂತಿ ತುಂಡಾಗಿ ಬಿದ್ದಿದೆ ಎಂದು ಹೇಳಿದ್ದಾರೆ.
ಕಾಲ್ತುಳಿತದಲ್ಲಿ ಇಬ್ಬರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, 32 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೈದರ್‍ಗಢ ಮತ್ತು ತ್ರಿವೇದಿಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಜೊತೆಗೆ ಗಂಭೀರ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೋನಿಕತ್ರ ಪೊಲೀಸ್ ಠಾಣೆ ವ್ಯಾಪ್ತಿಯ ಮುಬಾರಕ್ ಪುರ ಗ್ರಾಮದ ಪ್ರಶಾಂತ್ (22) ಮತ್ತು 30 ವರ್ಷದ ಮತ್ತೊಬ್ಬ ಭಕ್ತ ತ್ರಿವೇದಿಗಂಜ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‌ಸಿ) ಚಿಕಿತ್ಸೆ ಪಡೆಯುತ್ತಿದ್ದಾಗ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ
ಈತನ್ಮಧ್ಯೆ ಘಟನೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಬಾರಾಬಂಕಿ ಜಿಲ್ಲೆಯ ಶ್ರೀ ಅವಸನೇಶ್ವರ ಮಹಾದೇವ್ ದೇವಾಲಯ ಸಂಕೀರ್ಣದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಸಂಭವಿಸಿದ ಜೀವಹಾನಿಗೆ ತೀವ್ರ ಸಂತಾಪ ಸೂಚಿಸುತ್ತೇನೆಂದು ಹೇಳಿದ್ದಾರೆ.
ಅಗಲಿದ ಆತ್ಮಗಳಿಗೆ ಮೋಕ್ಷ ದೊರೆಯಲಿ ಮತ್ತು ಗಾಯಗೊಂಡವರಿಗೆ ಶೀಘ್ರ ಚೇತರಿಕೆ ದೊರೆಯಲಿ ಪ್ರಾರ್ಥಿಸಿರುವ ಯೋಗಿ ಆದಿತ್ಯನಾಥ್ ಅವರು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Advertisement