
ಕೊಯಮತ್ತೂರು: ಕರ್ನಾಟಕದ ಕಬಿನಿ ಮತ್ತು ಕೆಎಸ್‌ಆರ್ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಹರಿದುಬರುತ್ತಿರುವುದರಿಂದ ತಮಿಳುನಾಡಿನ ಪ್ರಮುಖ ಅಣೆಕಟ್ಟುಗಳು ತುಂಬಿ ತುಳುಕುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಸೋಮವಾರ ಹೊಗೇನಕಲ್‌ನಲ್ಲಿ ನೀರಿನ ಮಟ್ಟ 1.25 ಲಕ್ಷ ಕ್ಯೂಸೆಕ್‌ಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ.
ಕರ್ನಾಟಕದಿಂದ ಭಾರೀ ಪ್ರಮಾಣದ ನೀರಿನ ಒಳಹರಿವಿನಿಂದಾಗಿ, ರಾಜ್ಯದ ಅತಿ ದೊಡ್ಡದಾದ ಮೆಟ್ಟೂರು ಅಣೆಕಟ್ಟು ಜುಲೈ 25 ರಂದು ನಾಲ್ಕನೇ ಬಾರಿಗೆ 120 ಅಡಿ ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಿತು. ಸದ್ಯ ಒಂದು ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಮೆಟ್ಟೂರು ಜಲಾಶಯದಿಂದ ಕಾವೇರಿಗೆ ಬಿಡಲಾಗಿದ್ದ ಹೆಚ್ಚುವರಿ ನೀರು ಸೋಮವಾರ ಮುಕ್ಕೊಂಬು ಬ್ಯಾರೇಜ್‌ಗೆ ತಲುಪಿತು. ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ತಿರುಚ್ಚಿಗೆ ಆಗಮಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ರಕ್ಷಣಾ ತಂಡ ಕಾವೇರಿ ದಡದಲ್ಲಿ ವಾಸಿಸುವ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಿದೆ.
ಸೋಮವಾರ ಮಧ್ಯಾಹ್ನದಿಂದ ಮುಕ್ಕೊಂಬು ಬ್ಯಾರೇಜ್‌ಗೆ ಒಂದು ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ. ಅಧಿಕಾರಿಗಳು ಕಾವೇರಿಗೆ 23,000 ಕ್ಯೂಸೆಕ್, ಕೊಲ್ಲಿಡಂಗೆ 73,000 ಕ್ಯೂಸೆಕ್ ಮತ್ತು ಉತ್ತರ ನಾಲೆಗಳಿಗೆ 1,000 ಕ್ಯೂಸೆಕ್ ನೀರು ಬಿಡುಗಡೆ ಮಾಡಿದರು. ರಾತ್ರಿ ವೇಳೆಗೆ ಒಳಹರಿವು 1.15 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾಗಿರುವ ನಿರೀಕ್ಷೆಯಿದೆ.
ಕಾವೇರಿಗೆ 22,000 ಕ್ಯೂಸೆಕ್, ಕೊಳ್ಳಿಡಾಂಗೆ 6,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಟ್ಟು ಒಳಹರಿವು 29,000 ಕ್ಯುಸೆಕ್ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖ ಜಲಾಶಯಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯದ ರೈತರು ಈ ಹಂಗಾಮಿನಲ್ಲಿ ನೀರಾವರಿಗೆ ಸಮರ್ಪಕ ನೀರು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು.
Advertisement