
ನವದೆಹಲಿ: ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಿದ್ದಾರೆ. ಜೊತೆಗೆ ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಗುಪ್ತಚರ ವೈಫಲ್ಯವನ್ನು ಪ್ರಶ್ನಿಸಿದ್ದಾರೆ. ಇಂತಹ ಭೀಕರ ಭಯೋತ್ಪಾದಕ ದಾಳಿ ನಡೆಯಲಿದೆ ಮತ್ತು ಪಾಕಿಸ್ತಾನದಲ್ಲಿ ಅದಕ್ಕೆ ಸಂಚು ರೂಪಿಸಲಾಗುತ್ತಿದೆ ಎಂದು ಯಾವುದೇ ಸರ್ಕಾರಿ ಸಂಸ್ಥೆಗೆ ತಿಳಿದಿರಲಿಲ್ಲವೇ?” ಎಂದು ಕೇಳಿದ್ದಾರೆ.
ಜನರು ಈ ಸರ್ಕಾರವನ್ನು ನಂಬಿ ಪಹಲ್ಗಾಮ್‌ಗೆ ಹೋದರು. ಆದರೆ, ಸರ್ಕಾರ ಅವರನ್ನು ದೇವರ ದಯೆಗೆ ಬಿಟ್ಟಿತು. ಈ ಹಿಂದೆ ಡಾ. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ 26/11 ಮುಂಬೈ ದಾಳಿ ನಡೆದಾಗ ಎಲ್ಲಾ ಭಯೋತ್ಪಾದಕರು ಒಂದೇ ಸಮಯದಲ್ಲಿ ಕೊಲ್ಲಲ್ಪಟ್ಟರು. ಒಬ್ಬನನ್ನು ಹಿಡಿಯಲಾಯಿತು, ನಂತರ ಆತನನ್ನು ಗಲ್ಲಿಗೇರಿಸಲಾಯಿತು.
ಆ ದಾಳಿಯ ಬಳಿಕ ನೈತಿಕ ಹೊಣೆ ಹೊತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ರಾಜೀನಾಮೆ ನೀಡಿದರು, ಗೃಹ ಸಚಿವರು ರಾಜೀನಾಮೆ ನೀಡಿದರು. ಏಕೆಂದರೆ ನಾವು ನಮ್ಮ ಜನರಿಗೆ ಮತ್ತು ನಮ್ಮ ಭೂಮಿಗೆ ಜವಾಬ್ದಾರರಾಗಿದ್ದೇವೆ ಎಂಬ ಕಾರಣಕ್ಕೆ. ಆದರೆ, ಪಹಲ್ಗಾಮ್ ದಾಳಿಗೆ ತಮ್ಮ ಭದ್ರತಾ ವೈಫಲ್ಯ ಕಾರಣ ಎಂದು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ನನ್ನ ತಾಯಿಯ ಕಣ್ಣೀರಿನ ಬಗ್ಗೆ ಮಾತನಾಡಿದರು. ನಾನು ಇದಕ್ಕೆ ಉತ್ತರಿಸಲು ಬಯಸುತ್ತೇನೆ. ಭಯೋತ್ಪಾದಕರು ನನ್ನ ತಂದೆಯನ್ನು ಕೊಂದಾಗ ನನ್ನ ತಾಯಿಯ ಕಣ್ಣಲ್ಲಿ ನೀರು ಸುರಿದಿತ್ತು. ಇಂದು, ನಾನು ಪಹಲ್ಗಾಮ್ನಲ್ಲಿ ಮೃತಪಟ್ಟ ಆ 26 ಜನರ ಬಗ್ಗೆ ಮಾತನಾಡುವಾಗ ಅವರ ಕುಟುಂಬದ ನೋವು ನನಗೆ ಅರ್ಥವಾಗುತ್ತದೆ. ಏಕೆಂದರೆ, ನನ್ನ ಅಪ್ಪ ಕೂಡ ಉಗ್ರರ ದಾಳಿಗೆ ಬಲಿಯಾದವರು. ಆ ನೋವು ಏನೆಂಬುದು ನನ್ನ ಕುಟುಂಬಕ್ಕೆ ಚೆನ್ನಾಗಿ ಗೊತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಭಾವುಕರಾಗಿದ್ದಾರೆ.
ನೀವು ಇತಿಹಾಸದ ಬಗ್ಗೆ ಮಾತನಾಡುತ್ತೀರಿ, ನಾನು ವರ್ತಮಾನದ ಬಗ್ಗೆ ಮಾತನಾಡುತ್ತೇನೆ. ನೀವು ಯಾವಾಗಲೂ ಎಲ್ಲದಕ್ಕೂ ಒಂದು ನೆಪವನ್ನು ಹುಡುಕುತ್ತೀರಿ. ನೀವು ಇಡೀ ಗಾಂಧಿ-ನೆಹರು ಕುಟುಂಬದ ತಪ್ಪನ್ನು ಪಟ್ಟಿ ಮಾಡುತ್ತೀರಿ. ಹಾಗಾದರೆ, ನೀವು 11 ವರ್ಷಗಳಿಂದ ಅಧಿಕಾರದಲ್ಲಿದ್ದೀರಿ. ನೀವು ಏನು ಮಾಡಿದಿರಿ? ನಿನ್ನೆ ಗೌರವ್ ಗೊಗೊಯ್ ಗೃಹ ಸಚಿವರೊಂದಿಗೆ ಒಂದು ಪ್ರಶ್ನೆಯನ್ನು ಎತ್ತಿದರು. ಜನರ ರಕ್ಷಣೆ ನಿಮ್ಮ ಜವಾಬ್ದಾರಿಯಲ್ಲವೇ? ಎಂದು. ಆಗ ರಕ್ಷಣಾ ಸಚಿವ ರಾಜನಾಥ್ ತಲೆಯಾಡಿಸುತ್ತಿದ್ದರು, ಆದರೆ ಗೃಹ ಸಚಿವ ಅಮಿತ್ ಶಾ ನಗುತ್ತಿದ್ದರು ಎಂದು ಕಾಂಗ್ರೆಸ್ ನಾಯಕಿ ತಮ್ಮ ಭಾಷಣದ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಈಗಲೂ ಒಂದೇ ಪ್ರಶ್ನೆ ಕೇಳುತ್ತಿದ್ದೇನೆ. ಪಹಲ್ಗಾಮ್ ದಾಳಿ ಹೇಗೆ ಸಂಭವಿಸಿತು? ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಗೊಂಡಿದೆ ಎಂದು ಸರ್ಕಾರ ಪ್ರಚಾರ ಮಾಡುತ್ತಲೇ ಇತ್ತು. ಹಾಗಾದರೆ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಏನು ಮಾಡುತ್ತಿದ್ದರು? ಅವರು ಕಣಿವೆಯೊಳಗೆ ಬಂದು ಗುಂಡು ಹಾರಿಸುವವರೆಗೂ ಸರ್ಕಾರಕ್ಕೆ ಮಾಹಿತಿಯೇ ಸಿಗಲಿಲ್ಲವೆಂದರೆ ಭದ್ರತಾ ವೈಫಲ್ಯ ಎಷ್ಟರಮಟ್ಟಿಗೆ ಇದೆ, ಗುಪ್ತಚರ ವ್ಯವಸ್ಥೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದು ಇದರಲ್ಲೇ ಅರ್ಥವಾಗುತ್ತಿದೆ” ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಕೋಮುವಾದದ ಬಣ್ಣ ನೀಡುವ ಪ್ರಯತ್ನಗಳನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ. ಲೋಕಸಭೆಯಲ್ಲಿ ಕೆಲವು ಸಂಸದ ಪಹಲ್ಗಾಮ್ ದಾಳಿಯ ಸಂತ್ರಸ್ತರು “ಹಿಂದೂಗಳು” ಎಂದು ಹೇಳಿದ್ದಕ್ಕೆ “ಅವರು ಭಾರತೀಯರು” ಎಂದು ಪ್ರತಿಕ್ರಿಯಿಸಿದ್ದಾರೆ.
Advertisement