
ನವದೆಹಲಿ: ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಶೇ 25ರಷ್ಟು ಸುಂಕವು ಬಹಳ 'ಗಂಭೀರ' ವಿಷಯವಾಗಿದ್ದು, ಇದು ಅಮೆರಿಕದೊಂದಿಗಿನ ಭಾರತದ ವ್ಯಾಪಾರವನ್ನು 'ನಾಶಪಡಿಸುತ್ತದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಹೇಳಿದ್ದಾರೆ.
'ಇದು ನಮಗೆ ತುಂಬಾ ಗಂಭೀರವಾದ ವಿಷಯ... ಈಗಾಗಲೇ ಶೇ 25 ರಷ್ಟು ದಂಡವನ್ನು ಎದುರಿಸುತ್ತಿದ್ದೇವೆ. ನಾವು ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುತ್ತಿರುವುದರಿಂದ, ಹೆಚ್ಚುವರಿ ದಂಡವನ್ನು ವಿಧಿಸಬಹುದು. ಈ ಒಟ್ಟು ಮೊತ್ತವನ್ನು ಶೇ 35 ರಿಂದ 45 ಕ್ಕೆ ಹೆಚ್ಚಿಸಬಹುದು. ಕೆಲವರು ಶೇ 100 ರಷ್ಟು ದಂಡದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದು ಅಮೆರಿಕ ಜೊತೆಗಿನ ಭಾರತದ ವ್ಯಾಪಾರ ಸಂಬಂಧವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ವ್ಯಾಪಾರ ಮಾತುಕತೆಗಳು ಇನ್ನೂ ನಡೆಯುತ್ತಿವೆ ಮತ್ತು ದಂಡವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಆದರೆ, ಕಡಿಮೆಯಾಗದಿದ್ದರೆ, ಅದು ನಮ್ಮ ರಫ್ತಿನ ಮೇಲೆ ಹಾನಿಯುಂಟು ಮಾಡುತ್ತದೆ. ಏಕೆಂದರೆ, ಅಮೆರಿಕ ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ' ಎಂದು ಶಶಿ ತರೂರ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ANI ಉಲ್ಲೇಖಿಸಿದೆ.
'ಅವರ ಬೇಡಿಕೆಗಳು ಸಂಪೂರ್ಣವಾಗಿ ಅಸಮಂಜಸವಾಗಿದ್ದರೆ, ನಮ್ಮ ಸಮಾಲೋಚಕರು ವಿರೋಧಿಸುವ ಎಲ್ಲ ಹಕ್ಕನ್ನು ಹೊಂದಿದ್ದಾರೆ... ಅಮೆರಿಕ ನಮ್ಮ ಅಗತ್ಯಗಳನ್ನು ಸಹ ಅರ್ಥಮಾಡಿಕೊಳ್ಳಬೇಕು. ವ್ಯಾಪಾರ ವಿಷಯಗಳಲ್ಲಿ ಅಮೆರಿಕ ಭಾರತದ ಅಗತ್ಯಗಳನ್ನು ಸಹ ಪರಿಗಣಿಸಬೇಕು. ಅಮೆರಿಕದ ಉತ್ಪನ್ನಗಳ ಮೇಲಿನ ಭಾರತದ ಸುಂಕಗಳು ಅಷ್ಟೇನು ಹೆಚ್ಚಾಗಿಲ್ಲ. ಅವು ಸರಾಸರಿ ಶೇ 17 ರಷ್ಟಿವೆ. ನಿಜವಾದ ಸಮಸ್ಯೆಯೆಂದರೆ, ಅಮೆರಿಕದ ಉತ್ಪನ್ನಗಳು ತುಂಬಾ ದುಬಾರಿಯಾಗಿರುತ್ತವೆ ಮತ್ತು ಬೆಲೆಯಲ್ಲಿ ಸ್ಪರ್ಧಾತ್ಮಕವಾಗಿರುವುದಿಲ್ಲ. ಆದ್ದರಿಂದ ಅವು ಭಾರತದಲ್ಲಿ ಚೆನ್ನಾಗಿ ಮಾರಾಟವಾಗುವುದಿಲ್ಲ' ಎಂದು ಹೇಳಿದರು.
'ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು 'ಸವಾಲಿನ ಮಾತುಕತೆ' ಎಂದು ಬಣ್ಣಿಸಿದ ತರೂರ್, 'ಅಮೆರಿಕದ ಜೊತೆಗೆ ನಾವು ಹಲವು ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ನಾವು EU ಜೊತೆ ಮಾತುಕತೆ ನಡೆಸುತ್ತಿದ್ದೇವೆ ಮತ್ತು ಈಗಾಗಲೇ UK ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಭಾರತೀಯ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದಿದ್ದರೆ, ನಾವು ವ್ಯಾಪಾರಕ್ಕಾಗಿ ಇತರ ದೇಶಗಳತ್ತ ಗಮನಹರಿಸಲು ಪ್ರಾರಂಭಿಸಬಹುದು. ಭಾರತಕ್ಕೆ ಇನ್ನೂ ಇತರ ಆಯ್ಕೆಗಳಿವೆ ಮತ್ತು ಅದು ಅಮೆರಿಕದ ಮೇಲೆ ಮಾತ್ರ ಅವಲಂಬಿತವಾಗಿಲ್ಲ' ಎಂದರು.
'ಅಮೆರಿಕ ಅಸಮಂಜಸ ಬೇಡಿಕೆಗಳನ್ನು ಇಟ್ಟರೆ, ಭಾರತವು ಇತರ ವ್ಯಾಪಾರ ಪಾಲುದಾರರನ್ನು ಹುಡುಕಬೇಕಾಗುತ್ತದೆ. ಅದು ಭಾರತದ ಶಕ್ತಿಯಾಗಿದೆ. ಭಾರತದ ಆರ್ಥಿಕತೆಯು ಚೀನಾದಂತೆ, ಸಂಪೂರ್ಣವಾಗಿ ರಫ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ. ನಮಗೆ ಉತ್ತಮ ಮತ್ತು ಬಲವಾದ ದೇಶೀಯ ಮಾರುಕಟ್ಟೆ ಇದೆ. ಸಾಧ್ಯವಾದಷ್ಟು ಉತ್ತಮ ಒಪ್ಪಂದ ಮಾಡಿಕೊಳ್ಳಲು ನಾವು ನಮ್ಮ ಸಂಧಾನಕಾರರಿಗೆ ಬಲವಾದ ಬೆಂಬಲವನ್ನು ನೀಡಬೇಕು. ಉತ್ತಮ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ನಾವು ಬೇರೆ ಆಯ್ಕೆಗಳ ಕಡೆಗೆ ಹೋಗಬೇಕಾಗಬಹುದು...' ಎಂದು ತಿಳಿಸಿದರು.
Advertisement