
ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,000 ಗಡಿ ದಾಟಿದೆ.
ಮಂಗಳವಾರ ಬಿಡುಗಡೆಯಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕೇರಳದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ. ತದನಂತರದಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ದೆಹಲಿ ಇದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ ಐದು ಸಾವಿನ ಪ್ರಕರಣ ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,026ಕ್ಕೆ ಏರಿಕೆಯಾಗಿದೆ.
ಈ ವರ್ಷದ ಜನವರಿಯಿಂದ ದೇಶದಲ್ಲಿ 37 ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಬ್ಬರು ಮತ್ತು ಮಹಾರಾಷ್ಟ್ರದಲ್ಲಿ ಇಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೇ 22 ರಂದು ದೇಶದಲ್ಲಿ 257 ಸಕ್ರಿಯ ಪ್ರಕರಣಗಳಿದ್ದವು. ಅದು ಮೇ 31 ರ ವೇಳೆಗೆ 3,395 ಕ್ಕೆ ತದನಂತರ 4,026 ಪ್ರಕರಣಗಳಿಗೆ ಏರಿಕೆಯಾಗಿದೆ. ಸದ್ಯ ಕೇರಳದಲ್ಲಿ ದೇಶದಲ್ಲೇ ಅತಿ ಹೆಚ್ಚು 1,446 ಸಕ್ರಿಯ ಪ್ರಕರಣಗಳು ದಾಖಲಾಗಿದ್ದರೆ, ಮಹಾರಾಷ್ಟ್ರದಲ್ಲಿ 494, ಗುಜರಾತ್ 397 ಮತ್ತು ದೆಹಲಿ 393 ಪ್ರಕರಣಗಳನ್ನು ಹೊಂದಿದೆ.
Advertisement