
ನವದೆಹಲಿ: ಇಸ್ಲಾಮಿಕ್ ರಾಷ್ಟ್ರಗಳ ಒಗ್ಗಟ್ಟು ಉಲ್ಲೇಖಿಸಿ ಪಾಕಿಸ್ತಾನವು ಭಾರತೀಯ ನಿಯೋಗದ ಮಲೇಷ್ಯಾ ಭೇಟಿಗೆ ಅಡ್ಡಿಪಡಿಸಲು ಪ್ರಯತ್ನಿಸಿದೆ. ಆದರೆ ಕೌಲಾಲಂಪುರ್ ಇಸ್ಲಾಮಾಬಾದ್‌ನ ಹಸ್ತಕ್ಷೇಪವನ್ನು ತಿರಸ್ಕರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭಾರತದ ಸರ್ವ ಪಕ್ಷ ನಿಯೋಗದ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಪಾಕಿಸ್ತಾನಿ ರಾಯಭಾರಿ ಕಚೇರಿ ಮಲೇಷ್ಯಾ ಅಧಿಕಾರಿಗಳನ್ನು ಒತ್ತಾಯಿಸಿದೆ. ಆದರೆ ಇದು ಕೆಲಸ ಮಾಡಿಲ್ಲ. ನಿಯೋಗಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿರುವುದಾಗಿ ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ.
ನಿಯೋಗದ ಎಲ್ಲಾ ಕಾರ್ಯಕ್ರಮಗಳು ಯೋಜಿತ ರೀತಿಯಲ್ಲಿ ನಡೆದಿವೆ. ಈ ಬೆಳವಣಿಗೆ ಪಾಕಿಸ್ತಾನಕ್ಕೆ ದೊಡ್ಡ ರಾಜತಾಂತ್ರಿಕ ಹಿನ್ನಡೆ ಎಂದು ನೋಡಲಾಗುತ್ತಿದೆ. ಜೆಡಿಯು ಸಂಸದ ಸಂಜಯ್ ಝಾ ನೇತೃತ್ವದ ನಿಯೋಗದಲ್ಲಿ ಬಿಜೆಪಿ ಸಂಸದರಾದ ಅಪರಾಜಿತಾ ಸಾರಂಗಿ, ಬ್ರಿಜ್ ಲಾಲ್, ಪ್ರದಾನ್ ಬರುವಾ ಮತ್ತು ಹೇಮಂಗ್ ಜೋಶಿ, ತೃಣಮೂಲದ ಅಭಿಷೇಕ್ ಬ್ಯಾನರ್ಜಿ, ಸಿಪಿಎಂನ ಜಾನ್ ಬ್ರಿಟಾಸ್, ಕಾಂಗ್ರೆಸ್‌ನ ಸಲ್ಮಾನ್ ಖುರ್ಷಿದ್ ಮತ್ತು ಮಾಜಿ ರಾಜತಾಂತ್ರಿಕ ಮೋಹನ್ ಕುಮಾರ್ ಅವರಿದ್ದರು.
ಕಾಶ್ಮೀರ ಸಮಸ್ಯೆ ಪ್ರಸ್ತಾಪಿಸಿ ನಿಯೋಗದ ಭೇಟಿಗೆ ಅಡ್ಡಿ: ಪಾಕಿಸ್ತಾನ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿ ನಿಯೋಗದ ಭೇಟಿಗೆ ಅಡ್ಡಿಪಡಿಸಲು ಯತ್ನಿಸಿದೆ. ಆದರೆ, ಇದು ಯಾವುದೇ ವರ್ಕೌಟ್ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ಸಂಜಯ್ ಝಾ ನೇತೃತ್ವದ ನಿಯೋಗ ಮಲೇಷ್ಯಾ ಅಲ್ಲದೆ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಿದೆ. ಭಾರತದ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ಬಹಿರಂಗಪಡಿಸಲು ಮತ್ತು 27 ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದನಾ ದಾಳಿ ಮತ್ತು ಆಪರೇಷನ್ ಸಿಂಧೂರ್, ಭಾರತದ ಪ್ರತಿದಾಳಿ ನಂತರ ಭಾರತದ ನಿಲುವನ್ನು ಸ್ಪಷ್ಟಪಡಿಸಲು ವಿದೇಶಕ್ಕೆ ತೆರಳಿದ್ದ ಏಳು ನಿಯೋಗಗಳಲ್ಲಿ ಇದೂ ಒಂದಾಗಿದೆ.
ಭಾರತಕ್ಕೆ ಮರಳಿದ ಸಂಜಯ್ ಝಾ ನೇತೃತ್ವದ ನಿಯೋಗ:
ಸಂಜಯ್ ಝಾ ನೇತೃತ್ವದ ನಿಯೋಗ ಇಂದು ಭಾರತಕ್ಕೆ ಮರಳಿದೆ. ಸುದ್ದಿ ಸಂಸ್ಥೆ IANS ಜೊತೆಗೆ ಮಾತನಾಡಿದ ಸಂಜಯ್ ಝಾ "ನಾವು ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ, ಇಂಡೋನೇಷ್ಯಾ ಮತ್ತು ಮಲೇಷ್ಯಾಕ್ಕೆ ಭೇಟಿ ನೀಡಿದ್ದೇವೆ. ಭೇಟಿಯಿಂದ ನಾಲ್ಕೈದು ಪ್ರಮುಖ ಸಂದೇಶಗಳನ್ನು ರವಾನಿಸಲಾಗಿದೆ ಎಂದು ತಿಳಿಸಿದರು.
ಮೊದಲನೆಯದಾಗಿ ಭಯೋತ್ಪಾದನೆ ವಿರುದ್ಧ ಇಡೀ ದೇಶವು ಒಗ್ಗಟ್ಟಾಗಿದೆ ಎಂಬ ಬಲವಾದ ಸಂದೇಶವನ್ನು ನೀಡಿದೆ. ಎರಡನೆಯದಾಗಿ ಎಲ್ಲಾ ದೇಶಗಳು ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು, ಮೃತರಾದ ಸಂತ್ರಸ್ತರಿಗೆ ಶ್ರದ್ದಾಂಜಲಿ ಸಲ್ಲಿಸಿವೆ. ಮೂರನೆಯದಾಗಿ, ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಕೇಂದ್ರಗಳು ಮತ್ತು ಶಿಬಿರಗಳನ್ನು ಮಾತ್ರ ಸಂಯಮ ಮತ್ತು ನಿಖರ ದಾಳಿಗಳೊಂದಿಗೆ ಗುರಿಯಾಗಿಸಿತು. ನಾಲ್ಕನೆಯದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಮಾನಗಳು ಪುನರಾರಂಭಗೊಂಡಿವೆ. ಪಾಕಿಸ್ತಾನದ ವಿರುದ್ಧ ಎಫ್‌ಎಟಿಎಫ್ (ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್) ಕ್ರಮ ಕೈಗೊಳ್ಳಬೇಕು ಎಂದು ನಾವು ಒತ್ತಾಯಿಸಿದ್ದೇವೆ. ನಿಯೋಗಗಳು ಭಯೋತ್ಪಾದನೆಯ ವಿರುದ್ಧ ಬಲವಾದ ಸಂದೇಶವನ್ನು ರವಾನಿಸಿವೆ ಎಂದು ಅವರು ತಿಳಿಸಿದರು.
ಭಾರತದ ನಿಲುವಿಗೆ ಬೆಂಬಲ: ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸುವಂತೆ ಮನವೊಲಿಸುವುದು ನಮ್ಮ ಭೇಟಿಯ ಉದ್ದೇಶವಾಗಿತ್ತು ಎಂದು ಸಿಪಿಎಂನ ಜಾನ್ ಬ್ರಿಟಾಸ್ ತಿಳಿಸಿದರು. ಕಳೆದ 14 ದಿನಗಳಲ್ಲಿ ಐದು ರಾಷ್ಟ್ರಗಳಿಗೆ ಭೇಟಿ ನೀಡಿದ್ದು, ಪ್ರತಿಯೊಂದು ರಾಷ್ಟ್ರವೂ ಭಾರತದ ನಿಲುವನ್ನು ಬೆಂಬಲಿಸಿದ್ದು, ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸಿವೆ ಎಂದು ಬಿಜೆಪಿಯ ಅಪರಾಜಿತಾ ಸಾರಂಗಿ ತಿಳಿಸಿದರು.
Advertisement