
ನವದೆಹಲಿ: 1960ರ ಸಿಂಧೂ ಜಲ ಒಪ್ಪಂದ (IWT) ಮರು ಸ್ಥಾಪಿಸಲು ಪಾಕಿಸ್ತಾನ ಪದೇ ಪದೇ ಮನವಿ ಮಾಡುತ್ತಿದ್ದು, ಭಾರತ ಮೌನವಾಗಿರಲು ನಿರ್ಧರಿಸಿದೆ. ಬದಲಾಗಿ ಯಾವುದೇ ಮಾತುಕತೆ ನಡೆಸದೆ ಪಾಕಿಸ್ತಾನದ ನದಿಗಳಿಂದ ಬರುವ ನೀರನನ್ನು ಬೇರೆಡೆಗೆ ತಿರುಗಿಸಲು ಪೂರ್ವಭಾವಿಯಾಗಿ ಆಯಕಟ್ಟಿನ ಸ್ಥಾನಗಳಲ್ಲಿ ತನ್ನ ನೀರಿನ ಸಂಗ್ರಹ ಹಾಗೂ ಕಾಲುವೆ ಮೂಲಸೌಕರ್ಯವನ್ನು ಬಲಪಡಿಸುತ್ತಿದೆ.
ಪಾಕಿಸ್ತಾನದಿಂದ ನಾಲ್ಕು ಮನವಿ ಪತ್ರ: ಸಿಂಧೂ ಜಲ ಒಪ್ಪಂದ ಅಮಾನತ್ತಿನ ನಂತರ ಪಾಕಿಸ್ತಾನದಿಂದ ನಾಲ್ಕು ಮನವಿ ಪತ್ರಗಳನ್ನು ಸ್ವೀಕರಿಸಿರುವುದನ್ನು ಜಲಶಕ್ತಿ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಕಳುಹಿಸಿದ ಪತ್ರದಲ್ಲಿ ಸಿಂಧೂ ಜಲ ಒಪ್ಪಂದ ಅಮಾನತು ರದ್ದು ಪಡಿಸುವುದು, ನೀರಿನ ಹರಿವಿನ ನಿಯಂತ್ರಣಕ್ಕೆ ಸಹಕಾರದ ಚೌಕಟ್ಟು ಮರುಸ್ಥಾಪನೆಗಾಗಿ ಪಾಕಿಸ್ತಾನದ ಬಯಕೆಯನ್ನು ಸ್ಪಷ್ಟಪಡಿಸಿದೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ ನೇಪಾಳದ ಒಬ್ಬರು ಸೇರಿದಂತೆ 26 ಜನರು ಸಾವನ್ನಪ್ಪಿದ ಮಾರನೇ ದಿನ ಭಾರತವು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿರುವ ಸಿಂಧೂ ಜಲ ಒಪ್ಪಂದವನ್ನು ಅಮಾನತುಪಡಿಸಿತು.
ಖಾರಿಫ್ ಬೆಳೆಗೆ ತೀವ್ರ ನೀರಿನ ಬಿಕ್ಕಟ್ಟು: ಪಾಕಿಸ್ತಾನ ಪ್ರಸ್ತುತ ತೀವ್ರವಾದ ಬೇಸಿಗೆಯ ಬಿಸಿ ಹಾಗೂ ಭಾರತದ ಸಿಂಧೂ ನದಿ ನೀರು ನಿಯಂತ್ರಣದ ನಡುವೆ ಖಾರಿಫ್ ಬೆಳೆಗಳಿಗಾಗಿ ತೀವ್ರ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ. ಅಲ್ಲದೇ ವಿಶ್ವಬ್ಯಾಂಕ್‌ಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ವಿಶ್ವ ಬ್ಯಾಂಕ್ ನಿರಾಕರಿಸಿದೆ. ಪಾಕಿಸ್ತಾನದ ಮನವಿಗೆ ಸೂಪ್ಪು ಹಾಕದ ಭಾರತ ಸಿಂಧೂ ಜಲಾನಯನ ಪ್ರದೇಶದಿಂದ ನೀರು ತಿರುಗಿಸಲು ಅನುಕೂಲವಾಗುವಂತೆ ಮೂಲಸೌಕರ್ಯವನ್ನು ಹೆಚ್ಚಿಸಲು ಆದ್ಯತೆ ನೀಡಿದೆ.
ಚೆನಾಬ್-ರವಿ-ಬಿಯಾಸ್-ಸಟ್ಲೆಜ್ ಲಿಂಕ್ ಕಾಲುವೆ: ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳಲು ಚೆನಾಬ್-ರವಿ-ಬಿಯಾಸ್-ಸಟ್ಲೆಜ್ ಲಿಂಕ್ ಕಾಲುವೆ ಯೋಜನೆಗಾಗಿ ಪೂರ್ವ-ಸಾಧ್ಯತಾ ಅಧ್ಯಯನವನ್ನು ಪ್ರಾರಂಭಿಸಿದೆ. ಲಿಂಕ್ ಕಾಲುವೆಯು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಕಾಲುವೆಗಳಿಗೆ ನೀರನ್ನು ನೀಡುತ್ತದೆ. ಅಲ್ಲದೇ ಉದ್ದೇಶಿತ ಶಾರದಾ ಕಾಲುವೆಗೆ ಮತ್ತಷ್ಟು ಸಂಪರ್ಕ ಕಲ್ಪಿಸುತ್ತದೆ. ಭಾರತವು ತನ್ನ ಕೃಷಿ ಮತ್ತು ಕೈಗಾರಿಕಾ ಅಗತ್ಯಗಳನ್ನು ಪೂರೈಸಲು 15-20 ಮಿಲಿಯನ್ ಎಕರೆಗಳಿಗೆ ಅಗತ್ಯವಿರುವಷ್ಟು ನೀರನ್ನು ತಿರುಗಿಸಲು ಯೋಜಿಸಿದೆ ಎಂದು ಹಿರಿಯ ಜಲ ಶಕ್ತಿ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.
ಸಿಂಧೂ ನದಿಯಿಂದ ನೀರನ್ನು ತಿರುಗಿಸಲು ಸಾಧ್ಯವಿಲ್ಲ, ಯಾಕೆ?
ಭಾರತವು ಸಿಂಧೂ ನದಿಯಿಂದ ನೀರನ್ನು ಏಕೆ ತಿರುಗಿಸಲು ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ, ಅದರ ಭೌಗೋಳಿಕ ನಿರ್ಬಂಧಗಳಂತಹ ಕಾರಣಗಳನ್ನು ಉಲ್ಲೇಖಿಸಿದರು. ಸಿಂಧೂ ನದಿಯಿಂದ ನೀರನ್ನು ತಿರುಗಿಸಲು ಜಸ್ಕರ್ ಮತ್ತು ಪಿರ್ ಪಂಜಾಲ್ ಶ್ರೇಣಿಗಳಾದ್ಯಂತ ಸಂಕೀರ್ಣ ಮತ್ತು ಭಾರೀ ಸುರಂಗದ ಅಗತ್ಯವಿದೆ. ಇದು ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ. ಆದರೆ ಅಗತ್ಯವಿದ್ದರೆ, ನಾವು ಸುಧಾರಿತ ಎಂಜಿನಿಯರಿಂಗ್ ಅನ್ನು ಅಳವಡಿಸಲು ಸಾಧ್ಯವಾಗುವಂತೆ ಪ್ರಯತ್ನ ಮಾಡುತ್ತೇವೆ ಎಂದರು.
ಪಾಕ್ ಭಯೋತ್ಪಾದನೆಗೆ ಶಾಶ್ವತವಾಗಿ ಬೆಂಬಲ ನಿಲ್ಲಿಸುವವರೆಗೂ ಒಪ್ಪಂದ ಅಮಾನತು: ಇಸ್ಲಾಮಾಬಾದ್ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು "ವಿಶ್ವಾಸಾರ್ಹವಾಗಿ ಮತ್ತು ಶಾಶ್ವತವಾಗಿ" ನಿಲ್ಲಿಸುವವರೆಗೆ ಒಪ್ಪಂದವನ್ನು ಅಮಾನತುಗೊಳಿಸಲಾಗುವುದು ಎಂದು ಭಾರತ ಹೇಳಿದೆ. ಇದಕ್ಕೆ ಭದ್ರತೆ ಕುರಿತ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ. ಪಾಕಿಸ್ತಾನ ವಿರುದ್ಧ ಎಷ್ಟೇ ಯುದ್ಧ, ಬಿಕ್ಕಟ್ಟು ಸೃಷ್ಟಿಯಾಗಿದ್ದರೂ ಇದೇ ಮೊದಲ ಬಾರಿಗೆ ಸಿಂಧೂ ನದಿ ಒಪ್ಪಂದವನ್ನು ಅಮಾನತು ಮಾಡಲಾಗಿದೆ.
Advertisement