Mumbai ಜೀವನಾಡಿ Local Train: 2005 ರಿಂದ 2024 ರವರೆಗೆ 51,802 ಮಂದಿ ಸಾವು, ನಿತ್ಯ ಸರಾಸರಿ 7 ಬಲಿ!
ಮುಂಬೈ: ಮುಂಬೈನ ಸ್ಥಳೀಯ ಅಥವಾ ಉಪನಗರ ರೈಲು ಜಾಲವು ಜನನಿಬಿಡ ನಗರದ ಜೀವನಾಡಿಯಾಗಿದ್ದು, ಸೋಮವಾರ ಮುಂಬ್ರಾ ಮತ್ತು ದಿವಾ ನಡುವೆ ನಡೆದ ದುರಂತ ಅಪಘಾತದ ಬಳಿಕ ಮುಂಬೈ ಜೀವನಾಡಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಮುಂಬೈನ ಲೋಕಲ್ ರೈಲುಗಳ ಕರಾಳ ಛಾಯೆ ಗೋಚರಿಸುತ್ತಿವೆ.
ಸೋಮವಾರ ಮುಂಬ್ರಾ ಮತ್ತು ದಿವಾ ನಡುವೆ ಚಲಿಸುತ್ತಿದ್ದ ಲೋಕಲ್ ರೈಲಿನಲ್ಲಿ ಫುಟ್‌ಬೋರ್ಡ್‌ಗಳಲ್ಲಿ ನೇತಾಡುತ್ತಿದ್ದ ಹದಿಮೂರು ಜನರು ಆಯತಪ್ಪಿ ಬಿದ್ದಿದ್ದು, ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ. ಪ್ರಯಾಣಿಕರು ರೈಲ್ವೇ ಹಳಿ ಮೇಲೆ ಬಿದ್ದಿದ್ದು ಈ ವೇಳೆ ಬಂದ ರೈಲು ಅವರಿಗೆ ಢಿಕ್ಕಿಯಾಗಿದೆ.
ಮುಂಬೈ ಲೋಕಲ್ ರೈಲುಗಳು ಬಹುತೇಕ ಎಲ್ಲ ಸಮಯದಲ್ಲೂ ತುಂಬಿ ತುಳುಕುತ್ತಿರುತ್ತವೆ. ಉತ್ತರ ಮುಂಬೈನಿಂದ ದಕ್ಷಿಣ ಮುಂಬೈ ವರೆಗಿನ ಸುಮಾರು 450 ಕಿಲೋಮೀಟರ್ ರೈಲು ಜಾಲ, ವಿಶ್ವದ ಅತ್ಯಂತ ಹಳೆಯ ಮತ್ತು ಜನನಿಬಿಡ ರೈಲು ಜಾಲಗಳಲ್ಲಿ ಒಂದಾಗಿದೆ.
ಇದು ಪ್ರತಿದಿನ 7.5 ಮಿಲಿಯನ್ ಪ್ರಯಾಣಿಕರನ್ನು ಹೊಂದಿದೆ. ಈ ರೈಲುಗಳಲ್ಲಿನ ಪ್ರಯಾಣ ಎಂದರೆ ಅದು ಹೆಚ್ಚು ಸಾಹಸಮಯವೇ ಎನ್ನಬಹುದು. ಜನರು ಫುಟ್‌ಬೋರ್ಡ್‌ಗಳಲ್ಲಿ ನಿಂತು ಅಪಾಯಕಾರಿಯಾಗಿ ಸವಾರಿ ಮಾಡುತ್ತಾರೆ. ಅದಕ್ಕಾಗಿಯೇ ಇದು ಅತ್ಯಂತ ಮಾರಕ ಜಾಲಗಳಲ್ಲಿ ಒಂದಾಗಿದೆ.
19 ವರ್ಷಗಳಲ್ಲಿ 51 ಸಾವಿರ ಬಲಿ, ನಿತ್ಯ ಸರಾಸರಿ 7 ಸಾವು
ಇನ್ನು ಈ ಲೋಕಲ್ ರೈಲುಗಳಲ್ಲಿನ ಇತಿಹಾಸ ಕೂಡ ಕರಾಳವಾಗಿದ್ದು, 2005ರಿಂದ 2024ರವರೆಗೂ ವಿವಿಧ ರೈಲು ಸಂಬಂಧಿತ ದುರಂತಗಳಲ್ಲಿ ಬರೊಬ್ಬರಿ 51,802 ಮಂದಿ ಬಲಿಯಾಗಿದ್ದಾರೆ. ಅಂದರೆ ಪ್ರತಿದಿನ ಸರಾಸರಿ ಏಳು ಸಾವುಗಳು ಸಂಭವಿಸುತ್ತಿವೆ.
ಮುಂಬೈ ಲೋಕಲ್ ರೈಲುಗಳಲ್ಲಿನ ಸಾವು ದೀರ್ಘ ಇತಿಹಾಸ ಹೊಂದಿದ್ದು, ರೈಲ್ವೇ ಇಲಾಖೆ ಕೂಡ ಇಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆಯಾದರೂ ಅದು ಸಾಲುತ್ತಿಲ್ಲ. ಬೋಗಿಗಳ ವಿಸ್ತರಣೆ, ರೈಲುಗಳ ನಡುವಿನ ಸಮಯದ ಅಂತರ ಕಡಿಮೆ ಮಾಡುವುದು, ಬೋಗಿಗಳಿಗೆ ಸ್ವಯಂ ಚಾಲಿತ ಬಾಗಿಲುಗಳ ಅಳವಡಿಕೆಯಂತಹ ಕ್ರಮಗಳನ್ನು ರೈಲ್ವೇ ಇಲಾಖೆ ಘೋಷಿಸಿದೆ.
ಆದಾಗ್ಯೂ ಕಿಕ್ಕಿರಿದು ತುಂಬುವ ಪ್ರಯಾಣಿಕರಿಂದಾಗಿ ಈ ಎಲ್ಲ ಕ್ರಮಗಳು ಕೆಲಸಕ್ಕೆ ಬಾರದಂತಾಗಿವೆ. ಎಸಿ ರಹಿತ ಬೋಗಿಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸುವುದರಿಂದ ಆ ಬೋಗಿಗಳಲ್ಲಿರುವ ಪ್ರಯಾಣಿಕರಿಗೆ ಉಸಿರುಗಟ್ಟುವ ಸಾಧ್ಯತೆ ಎಂದೂ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ರೈಲು ಬೋಗಿಗಳಲ್ಲಿರುವ ಫ್ಯಾನ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದೂ ಪ್ರಯಾಣಿಕರು ದೂರುತ್ತಿರುತ್ತಾರೆ.
ಕಡಿಮೆ ಬಾಡಿಗೆ, ದೂರದ ಪ್ರಯಾಣ
ಮುಂಬೈ ನಗರದ ಬೆಳೆಯುತ್ತಿರುವ ಪ್ರಾದೇಶಿಕ ಅಸಮಾನತೆಯೂ ಇದಕ್ಕೆ ಕಾರಣವಾಗಿದೆ. ಮುಂಬೈನ ಕೈಗೆಟುಕಲಾಗದ ರಿಯಲ್ ಎಸ್ಟೇಟ್ ಬೆಲೆಗಳು ಹೆಚ್ಚಿನ ಉಪನಗರ ಪ್ರಯಾಣಿಕರ ದಟ್ಟಣೆಯನ್ನು ವಿವರಿಸುತ್ತವೆ. ಮನೆ ಬಾಡಿಗೆ ಮತ್ತು ಮನೆ ಬೆಲೆಗಳು ಕಡಿಮೆ ಇರುವ ಹೊರವಲಯದಲ್ಲಿ ಜನರು ವಾಸಿಸುತ್ತಾರೆ. ಇದರ ಒಂದು ನ್ಯೂನತೆಯೆಂದರೆ ಅವರು ದೀರ್ಘ ಗಂಟೆಗಳ ಕಾಲ ಪ್ರಯಾಣದಲ್ಲಿ ಕಳೆಯುತ್ತಾರೆ.
ಪ್ರಯಾಣಿಕರ ಸಂಘಟನೆಗಳು ಹೆಚ್ಚಿನ ರೈಲುಗಳನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದು, ಕುರ್ಲಾ ಮತ್ತು ಕಲ್ಯಾಣ್ ನಡುವೆ ನಾಲ್ಕು ಹಳಿಗಳ ವ್ಯವಸ್ಥೆ ಕಲ್ಪಿಸಬೇಕು. ಈ ಮಾರ್ಗದಲ್ಲಿ ಪ್ರಯಾಣಿಕರ ಹೊರೆ ಹೆಚ್ಚು ಮತ್ತು ಮುಂಬೈನ ಉಪನಗರ ರೈಲ್ವೆಗೆ ವಿಶೇಷ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸುತ್ತಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ