
ಪಾಟ್ನಾ: ಬೈಕ್, ನಗದು ಮತ್ತು ಆಭರಣಗಳು ವರದಕ್ಷಿಣೆಯಾಗಿ ಸಿಗದ ಕಾರಣ, ಅನಾರೋಗ್ಯ ಪೀಡಿತ ಗಂಡನಿಗೆ ತನ್ನ ಮೂತ್ರಪಿಂಡವನ್ನು ದಾನ ಮಾಡುವಂತೆ ತಮ್ಮ ಸೊಸೆಗೆ ಅತ್ತೆ ಮಾವ ಬೇಡಿಕೆ ಇಟ್ಟಿರುವ ವಿಚಿತ್ರ ಸನ್ನಿವೇಶ ನಡೆದಿದೆ.
ದೀಪ್ತಿ ಎಂಬ ಮಹಿಳೆ ತನ್ನ ಪರಿಸ್ಥಿತಿಯ ಬಗ್ಗೆ ಮುಜಫರ್‌ಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಕಷ್ಟವನ್ನು ವಿವರಿಸಿರುವ ಮಹಿಳೆಗೆ 2021 ರಲ್ಲಿ ವಿವಾಹವಾಗಿದೆ. ಮದುವೆ ನಂತರ ಮುಜಫರ್‌ಪುರದ ಬೊಚಾಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತನ್ನ ಮಾವನ ಮನೆಗೆ ತೆರಳಿದಳು. ಹಿಂದೆ, ಅವಳು ವಿಭಾಗೀಯ ಪ್ರಧಾನ ಕಚೇರಿ ಪಟ್ಟಣದ ಮಿಥನ್‌ಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಸಿಸುತ್ತಿದ್ದಳು.
ಆರಂಭಿಕ ವರ್ಷಗಳಲ್ಲಿ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು.ಕೆಲವು ಸಮಯೆದ ನಂತರ ಗಂಡನ ಪೋಷಕರು ಅವಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಲು ಪ್ರಾರಂಭಿಸಿದರು, ಆಕೆಯ ತವರು ಮನೆಯಿಂದ ಬೈಕ್ ಮತ್ತು ಹಣವನ್ನು ತರುವಂತೆ ಒತ್ತಾಯಿಸಿದರು. ಅವರ ಬೇಡಿಕೆಗಳನ್ನು ಈಡೇರಿಸಲು ವಿಫಲವಾದಾಗ, ಮೂತ್ರಪಿಂಡಗಳಲ್ಲಿ ಒಂದನ್ನು ತನ್ನ ಅನಾರೋಗ್ಯ ಪೀಡಿತ ಗಂಡನಿಗೆ ದಾನ ಮಾಡುವಂತೆ ಅತ್ತೆ ಮಾವ ಒತ್ತಾಯಿಸಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ.
"ನನ್ನ ಗಂಡನ ಮೂತ್ರಪಿಂಡದ ಕಾಯಿಲೆಯ ಬಗ್ಗೆ ಮದುವೆಯಾದ ಎರಡು ವರ್ಷಗಳ ನಂತರ ನನಗೆ ತಿಳಿದುಬಂತು, ಆದರೆ ಅವರು ಮದುವೆಗೆ ಮೊದಲೇ ಅವರು ಕಾಯಿಲೆಯಿಂದ ಬಳಲುತ್ತಿದ್ದರು" ಎಂದು ಆಕೆ ಆರೋಪಿಸಿದ್ದಾರೆ.
ಆರಂಭದಲ್ಲಿ, ನಾನು ಅವರ ಬೇಡಿಕೆಯನ್ನುಗಂಭೀರವಾಗಿ ಪರಿಗಣಿಸಿರಲಿಲ್ಲ, ಆದರೆ ನಂತರ, ಅವರು ನನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ನಾನು ಅವರ ಬೇಡಿಕೆ ಈಡೇರಿಸಲು ನಿರಾಕರಿಸಿದಾಗ, ನನ್ನನ್ನು ಹೊಡೆದು ಮನೆಯಿಂದ ಹೊರಗೆ ಹಾಕುದರು" ಎಂದು ಮಹಿಳೆ ದೂರಿದ್ದಾರೆ. ಪೊಲೀಸರು ಎರಡೂ ಕಡೆಯವರ ನಡುವೆ ಶಾಂತಿ ಸಂಧಾನ ನಡೆಸಲು ಪ್ರಯತ್ನಿಸಿ ವಿಫಲರಾದರು.
ದೀಪ್ತಿ ತನ್ನ ಪತಿಯಿಂದ ವಿಚ್ಛೇದನ ಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಅವರು ಅವಳನ್ನು ಬಿಟ್ಟು ಹೋಗಲು ನಿರಾಕರಿಸಿದು. ನಂತರ, ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು, ಅವರ ಪತಿ ಸೇರಿದಂತೆ ಅವರ ಅತ್ತೆ-ಮಾವನ ಕುಟುಂಬದ ನಾಲ್ವರು ಸದಸ್ಯರನ್ನು ಆರೋಪಿಗಳನ್ನಾಗಿ ಹೆಸರಿಸಲಾಯಿತು.
ಈ ಸಂಬಂಧ ತನಿಖೆ ಆರಂಭಿಸಲಾಗಿದೆ ಎಂದು ಮುಜಫರ್‌ಪುರದ ಎಸ್‌ಪಿ (ಗ್ರಾಮೀಣ) ವಿದ್ಯಾಸಾಗರ್ ಹೇಳಿದರು. ಪ್ರಕರಣ ಸಂಬಂಧ ಆಳವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.
ಬಿಹಾರದಲ್ಲಿ, ವರದಕ್ಷಿಣೆ ಪದ್ಧತಿಯನ್ನು ನಿಷೇಧಿಸಲಾಗಿದೆ. ವರದಕ್ಷಿಣೆ ಬೇಡಿಕೆಯಿರುವ ಯಾವುದೇ ಮದುವೆ ಸಮಾರಂಭದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಹಿಂದೆ ಘೋಷಿಸಿದ್ದರು.
Advertisement