
ಹಾಪುರ್: ಗಂಡನಿಂದಾಗಿ ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರು ಫಾಲೋವರ್ ಗಳು ಕಡಿಮೆಯಾಗಿದ್ದಾರೆ ಎಂಬ ಕಾರಣಕ್ಕೇ ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧವೇ ಪೊಲೀಸ್ ದೂರು ನೀಡಿರುವ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಈ ಘಟನೆ ನಡೆದಿದ್ದು, 'ಮನೆಗೆಲಸದ ನಡುವೆ Reels ಮಾಡಲು ಸಮಯವೇ ಸಿಗುತ್ತಿಲ್ಲ.. ಗಂಡನಿಂದಾಗಿ ಇಬ್ಬರು Instagram followers ಕಡಿಮೆ ಆಗಿದ್ದಾರೆ ಎಂದು ಆರೋಪಿಸಿ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಿಲ್ಖುವಾ ಮೂಲದ ನಿಶಾ ಎಂಬ ಮಹಿಳೆ ನೋಯ್ಡಾ ನಿವಾಸಿ ವಿಜೇಂದ್ರ ಅವರನ್ನು ವಿವಾಹವಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿಯಮಿತ ರೀಲ್ಸ್ ಗಳಿಗೆ ಹೆಸರುವಾಸಿಯಾದ ನಿಶಾ, ತಮ್ಮ ಫಾಲೋವರ್‌ಗಳ ಸಂಖ್ಯೆಯಲ್ಲಿ ಹಠಾತ್ ಕುಸಿತವನ್ನು ಗಮನಿಸಿ ಅಸಮಾಧಾನಗೊಂಡಿದ್ದಾರೆ.
ಗಂಡನಿಂದಾಗಿ ರೀಲ್ಸ್ ಮಾಡಲು ಸಮಯವೇ ಸಿಗುತ್ತಿಲ್ಲ. ಹೀಗಾಗಿ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿನ ಫಾಲೋವರ್ ಗಳ ಸಂಖ್ಯೆಯಲ್ಲಿ 2 ಕಡಿಮೆಯಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ರೀಲ್ಸ್ ವಿಚಾರಕ್ಕೆ ದಂಪತಿ ನಡುವೆ ಜಗಳ, ಪ್ರತ್ಯೇಕ ವಾಸ
ಇನ್ನು ಮದುವೆಯಾದಾಗಿನಿಂದಲೂ ರೀಲ್ಸ್ ಗೀಳಿಗೆ ದಾಸಿಯಾಗಿರುವ ಪತ್ನಿಯ ವಿರುದ್ಧ ಪತಿ ವಿಜೇಂದ್ರ ಅಸಮಾಧಾನಗೊಂಡಿದ್ದರು. ಜಾಸ್ತಿ ಮೊಬೈಲ್ ಬಳಕೆ ಮಾಡಬೇಡ ಎಂದು ಪತಿ ವಿಜೇಂದ್ರ ಪತ್ನಿ ನಿಶಾಗೆ ತಾಕೀತು ಮಾಡಿದ್ದ. ವಿಜೇಂದ್ರ ಅವರು ತಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಕಡಿಮೆ ಮಾಡಿ ಮನೆಯ ಜವಾಬ್ದಾರಿಗಳಿಗೆ ಹೆಚ್ಚಿನ ಗಮನ ನೀಡಬೇಕೆಂದು ಈ ಹಿಂದೆ ಸೂಚಿಸಿದ್ದ. ಇದರಿಂದಾಗಿ ನಿಶಾ ಕೂಡ ಹೆಚ್ಚಾಗಿ ರೀಲ್ಸ್ ಮಾಡಲು ಸಾಧ್ಯವಾಗಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆಯೂ ಆಗಾಗ ಜಗಳ ಏರ್ಪಡುತ್ತಿತ್ತು.
ಇನ್ ಸ್ಟಾಗ್ರಾಮ್ ಫಾಲೋವರ್ ಗಳ ಸಂಖ್ಯೆಯಲ್ಲಿ ಇಬ್ಬರ ಕುಸಿತ
ಈ ನಡುವೆ ನಿಶಾ ಅವರ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ದಿಢೀರನೆ ಇಬ್ಬರು ಫಾಲೋವರ್ ಗಳ ಸಂಖ್ಯೆ ಕುಸಿದಿದ್ದು, ಮತ್ತೆ ದಂಪತಿಗಳ ನಡುವೆ ಜಗಳಕ್ಕೆ ಕಾರಣವಾಗಿದೆ. ಫಾಲೋವರ್ ಗಳ ಸಂಖ್ಯೆ ಕಡಿತದಿಂದ ಆಕ್ರೋಶಗೊಂಡ ನಿಶಾ ಮತ್ತೆ ಗಂಡ ವಿಜೇಂದ್ರ ವಿರುದ್ಧ ಜಗಳಕ್ಕಿಳಿದಿದ್ದಾಳೆ.
ಜಗಳ ತಾರಕ್ಕೇರಿದ್ದು, ಬಳಿಕ ನಿಶಾ ಹಾಪುರದ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ತನ್ನ ಪತಿಯ ವಿರುದ್ಧ ದೂರು ನೀಡಿದ್ದಾಳೆ. ಪತ್ನಿಯ ಮಾತು ಕೇಳಿದ ಪೊಲೀಸರು ಇಬ್ಬರನ್ನೂ ಕೂರಿಸಿ ಸಂಧಾನಕ್ಕೆ ಯತ್ನಿಸಿದ್ದಾರೆ. ಬಳಿಕ ಇಬ್ಬರೂ ಮನೆಗೆ ತೆರಳಿದ್ದಾರೆಯಾದರೂ ಪರಸ್ಪರ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
Advertisement