
ನವದೆಹಲಿ: ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ಶನಿವಾರ ರಾಜ್‌ಕೋಟ್‌ನಲ್ಲಿ ನಡೆಯಲಿದೆ.
ಅಮೆರಿಕದಲ್ಲಿ ವಾಸಿಸುತ್ತಿರುವ ರೂಪಾನಿ ಅವರ ಪುತ್ರ ರಿಷಭ್ ರೂಪಾನಿ ಅವರು ಅಹಮದಾಬಾದ್‌ಗೆ ಬರುತ್ತಿದ್ದು, ಶನಿವಾರ ಬೆಳಿಗ್ಗೆ 4 ಗಂಟೆಗೆ ಬಂದಿಳಿಯುವ ನಿರೀಕ್ಷೆಯಿದೆ.
ಈಮಧ್ಯೆ, ಪತ್ನಿ ಅಂಜಲಿ ರೂಪಾನಿ ಅವರು ಶುಕ್ರವಾರ ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಲಂಡನ್‌ನಿಂದ ಅಹಮದಾಬಾದ್‌ಗೆ ಆಗಮಿಸಿದ್ದು, ನೇರವಾಗಿ ಗಾಂಧಿನಗರದ ತಮ್ಮ ಮನೆಗೆ ತೆರಳಿದರು.
ವಿವಿಧ ವಲಯಗಳ ನಾಯಕರು ಗಾಂಧಿನಗರದ ರೂಪಾನಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಅಂಜಲಿ ರೂಪಾನಿ ಮತ್ತು ದುಃಖಿತ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.
ಸಂಪುಟ ಸಚಿವರಾದ ಮುಲುಭಾಯಿ ಬೇರಾ, ಕುನ್ವರ್ಜಿ ಬವಾಲಿಯಾ, ಕುಬೇರ್ ದಿಂಡೋರ್, ಭಾನು ಬಬಾರಿಯಾ ಮತ್ತು ಕೇಂದ್ರ ಸಚಿವ ಪರ್ಶೋತ್ತಮ್ ರೂಪಾಲಾ ಸೇರಿದಂತೆ ಹಲವಾರು ಹಿರಿಯ ಬಿಜೆಪಿ ನಾಯಕರು ರೂಪಾನಿ ಅವರ ನಿವಾಸದಲ್ಲಿ ಗೌರವ ಸಲ್ಲಿಸಿದ್ದಾರೆ.
ಈ ನಷ್ಟದ ಸಮಯದಲ್ಲಿ ಐಕ್ಯತೆ ವ್ಯಕ್ತಪಡಿಸಲು ಸರ್ಕಾರಿ ಅಧಿಕಾರಿಗಳು ದುಃಖಿತ ಕುಟುಂಬವನ್ನು ಭೇಟಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಂಜಲಿ ರೂಪಾನಿ ಮತ್ತು ಇತರ ಕುಟುಂಬ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಂತಾಪ ಸೂಚಿಸಿದ್ದಾರೆ.
230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮೇಘಾನಿನಗರದ ಬಿಜೆ ವೈದ್ಯಕೀಯ ಕಾಲೇಜಿನ ಸಂಕೀರ್ಣಕ್ಕೆ ಅಪ್ಪಳಿಸಿತ್ತು. ದುರಂತದಲ್ಲಿ 265 ಜನ ಸಾವಿಗೀಡಾಗಿದ್ದಾರೆ.
Advertisement