
ನವದೆಹಲಿ: ಗಾಜಾದಲ್ಲಿ ಕದನ ವಿರಾಮಕ್ಕಾಗಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆ ನಿರ್ಣಯದ ವೇಳೆಯಲ್ಲಿ ಮತದಾನದಿಂದ ದೂರ ಉಳಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದೆ.
ಭಾರತದ ವಿದೇಶಾಂಗ ನೀತಿ ಹದಗೆಟ್ಟಿದೆ ಎಂದು ಆರೋಪಿಸಿದೆ. ಯುದ್ಧ, ನರಮೇಧದ ವಿರುದ್ಧ ಮತ್ತು ನ್ಯಾಯಕ್ಕಾಗಿ ಭಾರತವು ತನ್ನ ತಾತ್ವಿಕ ನಿಲುವನ್ನು ತ್ಯಜಿಸಿದೆಯೇ ಎಂಬುದಕ್ಕೆ ಸರ್ಕಾರದಿಂದ ಉತ್ತರವನ್ನು ವಿಪಕ್ಷ ಬಯಸಿದೆ. ನಮ್ಮ ವಿದೇಶಾಂಗ ನೀತಿ ಹದಗೆಟ್ಟಿದೆ ಎಂಬುದು ಈಗ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತಿದೆ. ಪ್ರಧಾನಿ ಮೋದಿ ಈಗ ಪದೇ ಪದೇ ಪ್ರಮಾದವಾಗುತ್ತಿರುವ ಬಗ್ಗೆ ವಿದೇಶಾಂಗ ಸಚಿವರಿಗೆ ಕರೆ ಮಾಡಬೇಕು ಮತ್ತು ಹೊಣೆಗಾರಿಕೆ ವಹಿಸಬೇಕಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಗಾಜಾದಲ್ಲಿ ಕದನ ವಿರಾಮಕ್ಕಾಗಿ ಯುಎನ್‌ಜಿಎ ನಿರ್ಣಯಕ್ಕೆ 149 ದೇಶಗಳು ಮತ ಹಾಕಿದರೆ, ಮತದಾನದಿಂದ ದೂರ ಉಳಿದ 19 ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ಈ ಹಂತದಿಂದ ನಾವು ವಾಸ್ತವಿಕವಾಗಿ ಪ್ರತ್ಯೇಕವಾಗಿ ನಿಲ್ಲುತ್ತೇವೆ ಎಂದಿದ್ದಾರೆ.
ಇದೇ ವೇಳೆ ಅಕ್ಟೋಬರ್ 8, 2023 ರಂದು ಇಸ್ರೇಲ್ ಜನರ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಕಾಂಗ್ರೆಸ್ ಖಂಡಿಸಿದೆ ಎಂದು ಖರ್ಗೆ ಹೇಳಿದ್ದಾರೆ.
ಇದೇ ರೀತಿಯ ಹೇಳಿಕೆ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಭಾರತ ಯಾವಾಗಲೂ ಶಾಂತಿ, ನ್ಯಾಯ ಮತ್ತು ಮಾನವನ ಘನತೆ ಬಗ್ಗೆ ನಿಲ್ಲುತ್ತದೆ ಎಂದಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವಿನ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ನಿರಾಸೆ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, ನೆತನ್ಯಾಹು ಅವರು ಇಡೀ ರಾಷ್ಟ್ರವನ್ನು ನಾಶಮಾಡುವಾಗ ನಾವು ಮೌನವಾಗಿರುವುದು ಮಾತ್ರವಲ್ಲ, ಅವರ ಸರ್ಕಾರ ಇರಾನ್‌ನ ಮೇಲೆ ದಾಳಿ ಮಾಡುತ್ತಿದ್ದು, ಸಾರ್ವಭೌಮತ್ವ ಮತ್ತು ಎಲ್ಲಾ ಅಂತಾರಾಷ್ಟ್ರೀಯ ಮಾನದಂಡಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ಅದರ ನಾಯಕನನ್ನು ಹತ್ಯೆ ಮಾಡುತ್ತಿರುವುದಕ್ಕೆ ನಾವು ಹರ್ಷೋದ್ಘಾರ ಮಾಡುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಿಯಾಂಕಾ ಗಾಂಧಿ ಪೋಸ್ಟ್ ಮಾಡಿದ್ದಾರೆ.
"ಒಂದು ರಾಷ್ಟ್ರವಾಗಿ, ನಮ್ಮ ಸಂವಿಧಾನದ ತತ್ವಗಳನ್ನು ಮತ್ತು ಶಾಂತಿ ಮತ್ತು ಮಾನವೀಯತೆಯ ಆಧಾರದ ಮೇಲೆ ಜಗತ್ತಿಗೆ ದಾರಿ ತೋರಿಸಿದ ನಮ್ಮ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ತ್ಯಜಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದಿರುವ ಅವರು, ನಿಜವಾದ ಜಾಗತಿಕ ನಾಯಕತ್ವವು ನ್ಯಾಯವನ್ನು ರಕ್ಷಿಸುವ ಧೈರ್ಯವನ್ನು ಬಯಸುತ್ತದೆ ಮತ್ತು ಭಾರತವು ಈ ಧೈರ್ಯವನ್ನು ಹಿಂದೆಯೂ ತಪ್ಪದೆ ತೋರಿಸಿದೆ.
" ವಿಭಜನೆ ಹೆಚ್ಚಾಗುತ್ತಿರುವ ಜಗತ್ತಿನಲ್ಲಿ, ಮಾನವೀಯತೆಗಾಗಿ ನಮ್ಮ ಧ್ವನಿಯನ್ನು ಮರುಪಡೆಯಬೇಕು ಮತ್ತು ಸತ್ಯ ಮತ್ತು ಅಹಿಂಸೆಗಾಗಿ ನಿರ್ಭಯವಾಗಿ ನಿಲ್ಲಬೇಕು" ಎಂದು ವಾದ್ರಾ ಪ್ರತಿಪಾದಿಸಿದ್ದಾರೆ.
Advertisement