
ತಿರುವನಂತಪುರಂ: ಅತ್ತ ಇಸ್ರೇಲ್ ಮತ್ತು ಇರಾನ್ ನಡುವೆ ಸೇನಾ ಸಂಘರ್ಷ ತೀವ್ರವಾಗಿರುವಂತೆಯೇ ಇತ್ತ ಕೇರಳದ ವಿಮಾನ ನಿಲ್ದಾಣದಲ್ಲಿ ಬ್ರಿಟನ್ ಸೇನೆಯ F-35 ಯುದ್ಧ ವಿಮಾನ ತುರ್ತು ಭೂಸ್ಪರ್ಶ ಮಾಡಿ ಆತಂಕ ಸೃಷ್ಟಿಸಿತ್ತು.
ಹೌದು.. ಕೇರಳ ರಾಜಧಾನಿ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ರಿಟನ್ ನೌಕಾಪಡೆಗೆ ಸೇರಿದ ಎಫ್-35 ಯುದ್ಧ ತುರ್ತು ಭೂಸ್ಪರ್ಶ ಮಾಡಿದೆ.
ಯುದ್ಧ ವಿಮಾನ ತುರ್ತು ಭೂಸ್ಪರ್ಶ ಮಾಡಿರುವುದು ಆರಂಭದಲ್ಲಿ ಆತಂಕಕ್ಕೆ ಕಾರಣವಾಗಿತ್ತಾದರೂ ಬಳಿಕ ಅದು ಇಂಧನ ಖಾಲಿಯಾಗಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ.
ಬ್ರಿಟನ್ ರಾಯಲ್ ನೇವಿಯ 5ನೇ ತಲೆಮಾರಿನ ಸ್ಟೆಲ್ತ್ ಫೈಟರ್ F-35 ಯುದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಇದು ಬ್ರಿಟನ್‌ನ HMS ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್‌ನ ಭಾಗವಾಗಿದೆ.
ಈ ಯುದ್ಧ ವಿಮಾನವು ಪ್ರಸ್ತುತ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿತ್ತು ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಸುಗಮ ಮತ್ತು ಸುರಕ್ಷಿತ ಭೂಸ್ಪರ್ಶವನ್ನು ಖಚಿತಪಡಿಸಿಕೊಳ್ಳಲು ವಿಮಾನ ನಿಲ್ದಾಣದ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಮಾನದಲ್ಲಿ ಇಂಧನ ಕಡಿಮೆಯಾಗಿರುವ ಬಗ್ಗೆ ಪೈಲಟ್ ಗಮನಕ್ಕೆ ತಂದಿದ್ದರು. ಕೂಡಲೇ ವಿಮಾನದ ಸುರಕ್ಷಿತ ಲ್ಯಾಡಿಂಗ್‌ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅನುಮೋದನೆ ಪಡೆದ ನಂತರ ಇಂಧನ ತುಂಬಿಸಲಾಗುವುದು ಎಂದು ತಿರುವನಂತಪುರ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement