
ವಾಷಿಂಗ್ಟನ್: ಇರಾನ್‌ನ ಪರಮಾಣು ಘಟಕಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ದಾಳಿಗೂ ಅಮೆರಿಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಅಮೆರಿಕದ ಕುಮ್ಮಕ್ಕು ಇದೆ ಎಂದು ಇರಾನ್ ಕುದಿಯುತ್ತಿದೆ. ಅಲ್ಲದೆ ಅಮೆರಿಕದ ಮೇಲೂ ದಾಳಿಗೂ ಹಿಂಜರಿಯುವುದಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಸಿದೆ.
ಇದೇ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದು ಇರಾನ್ ಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.
‘ಒಂದು ವೇಳೆ ಇರಾನ್ ಯಾವುದೇ ರೀತಿಯಲ್ಲಿ ಅಮೆರಿಕದ ಮೇಲೆ ದಾಳಿ ಮಾಡಿದರೆ, ಹಿಂದೆಂದೂ ನೋಡಿರದ ಮಟ್ಟದಲ್ಲಿ ಅಮೆರಿಕದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತದೆ’ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
‘ಇರಾನ್ ಮತ್ತು ಇಸ್ರೇಲ್ ನಡುವೆ ಸುಲಭವಾಗಿ ಒಪ್ಪಂದ ಮಾಡಿಕೊಳ್ಳಬಹುದು ಮತ್ತು ಈ ರಕ್ತಸಿಕ್ತ ಸಂಘರ್ಷವನ್ನು ಕೊನೆಗೊಳಿಸಬಹುದು’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ವೇದಿಕೆ 'ಟ್ರುತ್ ಸೋಶಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ‘ಇರಾನ್ ತನ್ನ ಪರಮಾಣು ಯೋಜನೆಗಳನ್ನು ಸ್ಥಗಿತಗೊಳಿಸುವ ಸಂಬಂಧ ಶೀಘ್ರ ಒಪ್ಪಂದಕ್ಕೆ ಬರಬೇಕು’ ಎಂದು ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.
ಮಧ್ಯ ಪ್ರಾಚ್ಯದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಹೇಳಿಕೆ ನೀಡಿದ್ದ ಟ್ರಂಪ್, ‘ಇನ್ನಷ್ಟು ವಿನಾಶವಾಗುವ ಮುನ್ನ ಇರಾನ್ ನಾಯಕತ್ವವು ಒಪ್ಪಂದಕ್ಕೆ ಬರಲು ಎರಡನೇ ಅವಕಾಶವಿದೆ.
ಒಂದು ಕಾಲದಲ್ಲಿ ಇರಾನ್ ಸಾಮ್ರಾಜ್ಯ ಎಂದು ಕರೆಯಲ್ಪಡುತ್ತಿತ್ತು, ಈಗ ಅವರಿಗೂ ಏನೂ ಉಳಿದಿಲ್ಲ. ಇರಾನ್‌ನ ಪರಿಸ್ಥಿತಿ ಕುರಿತಂತೆ ರಾಷ್ಟ್ರೀಯ ಭದ್ರತಾ ತಂಡದ ಜೊತೆ ಮಾತುಕತೆ ನಡೆಸಿದ್ದೇನೆ. ದಾಳಿಯಲ್ಲಿ ನಮ್ಮ ದೇಶದ ಯಾವುದೇ ಪಾತ್ರವಿಲ್ಲ. ಆದರೆ, ಇರಾನ್ ಮೇಲಿನ ದಾಳಿಗೆ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಬಳಸಿಕೊಂಡಿದೆ’ ಎಂದು ಹೇಳಿದ್ದರು.
ಇಸ್ರೇಲ್ ಉಳಿವಿಗೆ ಹೋರಾಟ
ಇನ್ನು ಇರಾನ್ ಮೇಲಿನ ದಾಳಿ ಸಮರ್ಥಿಸಿಕೊಂಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, '"ಇಸ್ರೇಲ್‌ನ ಉಳಿವಿಗೆ ಇರಾನ್‌ನಿಂದ ಬಂದಿರುವ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಬೆದರಿಕೆಯನ್ನು ತೆಗೆದುಹಾಕಲು ಈ ಕಾರ್ಯಾಚರಣೆ ಎಷ್ಟು ದಿನಗಳವರೆಗೆ ಬೇಕಾದರೂ ಮುಂದುವರಿಯುತ್ತದೆ. ತನ್ನ ದಾಳಿಗಳು ಉನ್ನತ ಜನರಲ್‌ಗಳನ್ನು ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಹಿರಿಯ ವಿಜ್ಞಾನಿಗಳು ಮತ್ತು ತಜ್ಞರನ್ನು ಕೊಂದಿವೆ.
ಇಸ್ರೇಲ್ ದಾಳಿಗಳು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಬಹುಶಃ ವರ್ಷಗಳ ಕಾಲ ಹಿಮ್ಮೆಟ್ಟಿಸಿದೆ. ನಾವು ಅಯತೊಲ್ಲಾಗಳ ಆಡಳಿತದ ಪ್ರತಿಯೊಂದು ಸ್ಥಳ ಮತ್ತು ಪ್ರತಿಯೊಂದು ಗುರಿಯನ್ನು ಹೊಡೆಯುತ್ತೇವೆ ಮತ್ತು ಅವರು ಇಲ್ಲಿಯವರೆಗೆ ಅನುಭವಿಸಿರುವುದು ಮುಂಬರುವ ದಿನಗಳಲ್ಲಿ ಅವರಿಗೆ ಹಸ್ತಾಂತರಿಸಲ್ಪಡುವುದಕ್ಕೆ ಹೋಲಿಸಿದರೆ ಏನೂ ಅಲ್ಲ ಎಂದು ನೇತನ್ಯಾಹು ಹೇಳಿದ್ದರು.
Advertisement