
ನವದೆಹಲಿ: ಯುದ್ಧಪೀಡಿತ ಇರಾನ್‌ನಿಂದ ಅರ್ಮೇನಿಯಾಗೆ ಸ್ಥಳಾಂತರಿಸಲ್ಪಟ್ಟ 110 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಬುಧವಾರ ತಡರಾತ್ರಿ ನವದೆಹಲಿಗೆ ಬಂದಿಳಿದಿದೆ.
ಈ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ 'ಆಪರೇಷನ್ ಸಿಂಧು' ಎಂದು ಹೆಸರಿಟ್ಟಿದ್ದು, ಕಾರ್ಯಾಚರಣೆ ಮೂಲಕ ಭಾರತೀಯರನ್ನು ಸ್ಥಳಾಂತರಿಸಲಾಗುತ್ತಿದೆ.
ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ನಡುವೆ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಮೊದಲು ನಗರದಿಂದ ಹೊರಗೆ ಸ್ಥಳಾಂತರಿಸಲಾಗಿತ್ತು.
ಈ ಪೈಕಿ 110 ಮಂದಿ ಇರಾನ್ ಗಡಿ ದಾಟಿ ನೆರೆಯ ಅರ್ಮೇನಿಯಾ ದೇಶಕ್ಕೆ ತೆರಳಿದ್ದರು. ಈ ವಿದ್ಯಾರ್ಥಿಗಳನ್ನು ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನೆರವಿನೊಂದಿಗೆ ಸ್ವದೇಶಕ್ಕೆ ಕರೆಲಾಗಿದೆ.
110 ಮಂದಿ ಪೈಕಿ 94 ವಿದ್ಯಾರ್ಥಿಗಳು ಕಾಶ್ಮೀರದವರಾಗಿದ್ದು, ಉಳಿದ 16 ವಿದ್ಯಾರ್ಥಿಗಳು ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಮೂಲದವರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಗೆ ಬಂದಿಳಿದ ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ನಜರ್ ಅವರು ಮಾತನಾಡಿ, ಈ ಹಿಂದೆ ಉಕ್ರೇನ್‌ನ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗಿತ್ತು. ಅದೇ ರೀತಿ ನಮ್ಮನ್ನೂ ರಕ್ಷಣೆ ಮಾಡುವ ನಂಬಿಕೆ ನಮಗಿತ್ತು. ಇರಾನ್ ನಲ್ಲಿ ಪರಿಸ್ಥಿತಿ ವಿನಾಶಕಾರಿಯಾಗಿರದಿದ್ದರೂ, ಸಾಮಾನ್ಯವಾಗಿರಲಿಲ್ಲ. ಡ್ರೋಣ್ ದಾಳಿ ನಡೆಯುತ್ತಿತ್ತು. ಜನರು ಗಾಯಗೊಂಡಿದ್ದರು, ಕ್ಷಿಪಣಿ ದಾಳಿ ಶಬ್ಧ ಕೇಳಿ ಬರುದಿತ್ತು. ನಮ್ಮನ್ನು ರಕ್ಷಣೆ ಮಾಡಿದ, ಸುರಕ್ಷಿತವಾಗಿ ಕರೆ ತಂದ ಕೇಂದ್ರ ಸರ್ಕಾರಕ್ಕೆ ನಿಜಕ್ಕೂ ಕೃತಜ್ಞರಾಗಿದ್ದೇವೆಂದು ಹೇಳಿದ್ದಾರೆ.
ಅರ್ಮೇನಿಯಾ ತಲುಪಿದ ನಂತರ ಸುರಕ್ಷಿತ ಭಾವನೆ ಮೂಡಿತ್ತು. ಇರಾನ್‌ನಲ್ಲಿ ಸುತ್ತಮುತ್ತಲು ಕ್ಷಿಪಣಿ ದಾಳಿ ಶಬ್ಧ ಕೇಳಿ ಬರುತ್ತಿತ್ತು. ಇದರಿಂದ ಭಯಭೀತರಾಗಿದ್ದೆವು ಎಂದು ಯಾಸಿರ್ ಜಾಫರ್ ಎಂಬುವವರು ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕಾತುರದಿಂದ ಕಾಯುತ್ತಿದ್ದ ಮರಿಯಮ್ ರೋಜ್ ಅವರ ತಾಯಿ ಮಾತನಾಡಿ, ನನ್ನ ಹಿಂತಿರುವುದಕ್ಕೆ ಒಪ್ಪಿರಲಿಲ್ಲ. ನಾನು ತುಂಬಾ ಮನವೊಲಿಸಿದೆ. ಅಂತಿಮ ಕ್ಷಣದಲ್ಲಿ ಬರಲು ಒಪ್ಪಿದಳು. ರಾಯಭಾರಿ ಕಚೇರಿ ಪದೇ ಪದೇ ವಿಮಾನ ವ್ಯವಸ್ಥೆ ಮಾಡುವುದನ್ನು ಮುಂದುವರೆಸುವುದಿಲ್ಲ. ಈ ಅವಕಾಶ ಬಳಸಿಕೊಳ್ಳುವಂತೆ ತಿಳಿಸಿದ್ದೆ ಎಂದು ಮನವೊಲಿಸಿದೆ ಎಂದು ತಿಳಿಸಿದ್ದಾರೆ.
ಮರಿಯಮ್ ಅವರು ಮಾತನಾಡಿ, ರಾಯಭಾರಿ ಕಚೇರಿ ಎಲ್ಲಾ ಮೇಲ್ವಿಚಾರಣೆ ನೋಡಿಕೊಂಡಿತ್ತು. ಮೂರು ದಿನಗಳ ಪ್ರಯಾಣದಿಂದ ಸಾಕಷ್ಟು ದಣಿದಿದ್ದೇನೆ. ಉಮ್ರಿಯಾದಿಂದ ಹೊರಟಾಗ ಕ್ಷಿಪಣಿಗಳು ಹಾರುವುದನ್ನು ಕಿಟಕಿಯಿಂದ ನೋಡಿದೆವು. ಬೆಳಗಿನ ಜಾನ 3 ಗಂಟೆಗೆ ವಸತಿ ನಿಲಯದ ಮೇಲೆ ಕ್ಷಿಪಣಿ ದಾಳಿಯಾಗಿ, ಕಟ್ಟಡ ಅಲುಗಾಡಿತ್ತು. ಇದರಿಂದ ಸಾಕಷ್ಟು ಭಯಭೀತಳಾಗಿದ್ದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿ ಗಜಲ್ ರಶೀದ್ ಅವರು ಮಾತನಾಡಿ, ಇಂದು ಭಾರತ ತಲುಪಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಭಾರತೀಯ ರಾಯಭಾರ ಕಚೇರಿ ನಮ್ಮನ್ನು ಸುರಕ್ಷಿತವಾಗಿ ಮತ್ತು ಉತ್ತಮ ರೀತಿಯಲ್ಲಿ ಮರಳಿ ಕರೆತಂದಿದೆ. ನಾವು ಅವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ. ರಾಜಧಾನಿ ಟೆಹ್ರಾನ್‌ನಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಆದರೆ, ಟೆಹ್ರಾನ್‌ಗೆ ಹೋಲಿಸಿದರೆ ನಾವು ತಂಗಿದ್ದ ಸ್ಥಳದಲ್ಲಿ ಹೆಚ್ಚಿನ ದಾಳಿಗಳಾಗಿರಲಿಲ್ಲ ಎಂದು ಹೇಳಿದ್ದಾರೆ.
ಪರಿಸ್ಥಿತಿ ಸುಧಾರಿಸಿದ ನಂತರ ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿಸಲು ಇರಾನ್‌ಗೆ ಮರಳುತ್ತೇವೆಂದು ಇದೇ ವೇಳೆ ವಿದ್ಯಾರ್ಥಿಗಳು ಹೇಳಿದ್ದಾರೆ.
ಇರಾನ್ ನಲ್ಲಿರುವ ಭಾರತೀಯರು ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ತುರ್ತು ಸಹಾಯವಾಣಿ ಸಂಪರ್ಕಿಸುವಂತೆ ಕೋರಿದೆ. ದೂರವಾಣಿ ಸಂಖ್ಯೆ: +989010144557, +989128109115; +989128109109.
ಇಸ್ರೇಲ್, ಇರಾನ್ ನಡುವಿನ ಸಂಘರ್ಷ ಇಂದು (ಜೂನ್ 17) ಸತತ ಐದನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧಪೀಡಿತ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘವು ಸ್ಥಳಾಂತರಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಿದೆ.
ಉಳಿದ ಎಲ್ಲಾ ವಿದ್ಯಾರ್ಥಿಗಳನ್ನು ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು ಎಂದು ನಾವು ಭಾವಿಸುತ್ತೇವೆ ಎಂದು ಒಕ್ಕೂಟವು ಹೇಳಿಕೆಯಲ್ಲಿ ತಿಳಿಸಿದೆ.
Advertisement