
ಹೈದರಾಬಾದ್: ಐಪಿಎಲ್ ಕ್ರಿಕೆಟ್ ಟೂರ್ನಿಯ ಪ್ರಮುಖ ತಂಡಗಳಲ್ಲಿ ಒಂದಾದ ಸನ್ ರೈಸರ್ಸ್ ಹೈದರಾಬಾದ್ ಮೇಲೆ ನಿಷೇಧದ ತೂಗುಗತ್ತಿ ತೂಗುತ್ತಿದೆ ಎಂದು ಹೇಳಲಾಗುತ್ತಿದ್ದು, ಹವಾಲಾ ಪ್ರಕರಣ (Money laundering)ಕ್ಕೆ ಸಂಬಂಧಿಸಿದಂತೆ ತಂಡದ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.
ಹೌದು.. ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ತಂಡವಾದ ಸನ್‌ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಗೆ ಸಿಇಒ ಕಾವ್ಯಾ ಮಾರನ್ ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬದೊಳಗಿನ ವಿವಾದದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೈ ಜಾರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕ ಸಂಸ್ಥೆಯಾದ ದಕ್ಷಿಣ ಭಾರತದ ಪ್ರಮುಖ ಮಾಧ್ಯಮ ಸಂಸ್ಥೆ ಸನ್ ನೆಟ್‌ವರ್ಕ್‌ನ ಮಾಲೀಕರಾದ ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ವಿರುದ್ಧ ಅವರ ಸಹೋದರ ದಯಾನಿಧಿ ಮಾರನ್, ಅಕ್ರಮ ಹಣ ವರ್ಗಾವಣೆ ಆರೋಪ ಮಾಡಿದ್ದಾರೆ.
ಈ ವಿವಾದವು ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕತ್ವದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು ತಂಡ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹವಾಲಾ ಹಗರಣ
ಮೂಲಗಳ ಪ್ರಕಾರ 'ವಿವಾದದ ಕೇಂದ್ರಬಿಂದು ಸನ್ ನೆಟ್‌ವರ್ಕ್‌ನ ಷೇರು ಹಂಚಿಕೆಯಾಗಿದೆ. 2003ಕ್ಕಿಂತ ಮೊದಲು, ಕಲಾನಿಧಿ ಮಾರನ್ ಮತ್ತು ಕರುಣಾನಿಧಿ ಕುಟುಂಬವು ಸನ್ ನೆಟ್‌ವರ್ಕ್‌ನಲ್ಲಿ ಸಮಾನ ಪಾಲನ್ನು ಹೊಂದಿತ್ತು. ಆದರೆ, 2003ರ ನಂತರ ಷೇರು ಹಂಚಿಕೆಯಲ್ಲಿ ಬದಲಾವಣೆಯಾಯಿತು. ತಂದೆ ಮುರಸೋಲಿ ಮಾರನ್ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಕಲಾನಿಧಿ ಮತ್ತು ಅವರ ಪತ್ನಿ ಕಾವೇರಿ ಮಾರನ್, ಕಂಪನಿಯ ನಿಯಂತ್ರಣವನ್ನು ತಮ್ಮ ಕೈವಶ ಮಾಡಿಕೊಂಡಿದ್ದಾರೆ ಎಂದು ದಯಾನಿಧಿ ಮಾರನ್ ದೂರಿದ್ದಾರೆ.
ಸಹೋದರನ ವಿರುದ್ಧವೇ ದಯಾನಿಧಿ ಮಾರನ್ ಆರೋಪ
ಇನ್ನು ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ವಿರುದ್ಧ ಅವರ ಸಹೋದರ ದಯಾನಿಧಿ ಮಾರನ್ ಅವರೇ ಮನಿ ಲಾಂಡರಿಂಗ್ ಆರೋಪ ಮಾಡುತ್ತಿದ್ದು, ಸನ್ ಡೈರೆಕ್ಟ್ ಟಿವಿ, ಸನ್ ಪಿಕ್ಚರ್ಸ್, ಎಫ್‌ಎಂ ಚಾನೆಲ್‌ಗಳು, ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನಂತಹ ಕಂಪನಿಗಳನ್ನು ಸ್ಥಾಪಿಸಲು ಸನ್ ನೆಟ್‌ವರ್ಕ್‌ನ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದಯಾನಿಧಿ ಆರೋಪಿಸಿದ್ದಾರೆ.
2005ರಲ್ಲಿ ಸನ್ ಟಿವಿ ತನ್ನ ತಾಯಿಯಾದ ಮಲ್ಲಿಕಾ ಮಾರನ್‌ಗೆ 10.64 ಕೋಟಿ ರೂಪಾಯಿ ಡಿವಿಡೆಂಡ್ ಪಾವತಿಸಿದೆ ಎಂದು ತಿಳಿಸಿತ್ತು, ಆದರೆ ಯಾವುದೇ ಪಾವತಿಯಾಗಿಲ್ಲ. ಈ ಹಣವನ್ನು ಸನ್‌ರೈಸರ್ಸ್ ಹೈದರಾಬಾದ್ ಸೇರಿದಂತೆ ಇತರ ಕಂಪನಿಗಳ ಸ್ಥಾಪನೆಗೆ ಬಳಸಲಾಗಿದೆ ಎಂದು ದಯಾನಿದಿ ಮಾರನ್ ಆರೋಪಿಸಿದ್ದಾರೆ.
SRH ಮೇಲೆ ನಿಷೇಧದ ತೂಗುಗತ್ತಿ
ಇನ್ನು ಈ ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವೇಳೆ ನ್ಯಾಯಾಲಯವು 2003ರ ಷೇರು ಮಾದರಿಯನ್ನು ಪುನಃಸ್ಥಾಪಿಸಬೇಕೆಂದು ತೀರ್ಪು ನೀಡಿದರೆ, ಸನ್ ನೆಟ್‌ವರ್ಕ್‌ನ ಮಾಲೀಕತ್ವದಲ್ಲಿ ಗಮನಾರ್ಹ ಬದಲಾವಣೆಯಾಗಬಹುದು.
ಇದರಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೇಲೂ ಪರಿಣಾಮ ಬೀರಬಹುದು. ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಮಧ್ಯಪ್ರವೇಶಿಸಿ, ತಂಡವನ್ನು ಮಾರಾಟ ಮಾಡುವಂತೆ ಒತ್ತಾಯಿಸಬಹುದು ಅಥವಾ ತಂಡವನ್ನೇ ನಿಷೇಧಿಸಲೂ ಬಹುದು. ಇದರಿಂದ ಕಾವ್ಯಾ ಮಾರನ್ ತಂಡದ ಸಿಇಒ ಮತ್ತು ಸಹ-ಮಾಲೀಕರಾಗಿ ಉಳಿಯದಿರಬಹುದು, ಇದು ತಂಡದ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಬಹುದು ಎಂದು ಹೇಳಲಾಗುತ್ತಿದೆ.
Advertisement